ವಿಜಯಪುರ: ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಜಿಲ್ಲೆಯ ಮದಭಾವಿಯ ಯುವಕ ವಿರೇಶ ಕವಟಗಿ ಇದೀಗ ಮೀನು ಸಾಕಣೆ ಮಾಡಿ ಯಶಸ್ಸು ಕಂಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಮೀನು ಸಾಕಣೆ ಆರಂಭಿಸಿ ಈಗ ಲಕ್ಷಾಂತರ ರೂ. ಗಳಿಸುತ್ತಿದ್ದಾರೆ. ಅಷ್ಟೇ ಅಲ್ಲ ಇತರರಿಗೂ ಪ್ರೇರಣೆಯಾಗಿದ್ದಾರೆ.
ವಿರೇಶ ಕವಟಗಿ ದೆಹಲಿಯಲ್ಲಿ ಬಿಇ ಇನ್ ಕಂಪ್ಯೂಟರ್ ಮತ್ತು ಕಮ್ಯುನಿಕೇಷನ್ ಕಲಿತು, ಸರ್ಕಾರಿ ಅಧಿಕಾರಿಯಾಗಬೇಕು ಎನ್ನುವ ಕನಸು ಕಂಡಿದ್ದರು. ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತ, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜನಿಯರ್ ಆಗಿ ಉದ್ಯೋಗ ಮಾಡುತ್ತಿದ್ದರು. ಎರಡು ವರ್ಷಗಳ ಹಿಂದೆ ದೇಶದಲ್ಲಿ ಕೋವಿಡ್ ವಕ್ಕರಿಸಿದ ಕಾರಣ ಆ ಕೆಲಸ ಬಿಟ್ಟು ಬಂದು ಸ್ವಂತ ಗ್ರಾಮದಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಛಲಕ್ಕೆ ಬಿದ್ದಾಗ ಅವರಿಗೆ ಹೊಳೆದಿದ್ದು ಮೀನು ಸಾಕಣೆ.
ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಮೀನು ಸಾಕಣೆ ಮಾಡಬೇಕೆಂದುಕೊಂಡರು. ಹೈದರಾಬಾದ್, ಕಯಿಕಲೂರ, ಮುಂಬೈ ಹಾಗೂ ಬೆಂಗಳೂರಿನಲ್ಲಿ ಮರ್ಲ ಜಾತಿ ಮೀನಿಗೆ ಹೆಚ್ಚು ಬೇಡಿಕೆ ಇದ್ದು, ಕೇವಲ 8 ತಿಂಗಳಲ್ಲಿ ಮೀನು ಕೈಗೆ ಬರುತ್ತದೆ. ಒಂದು ಜೀವಂತ ಮೀನು ಕೆ.ಜಿಗೆ 400 ರೂ. ಇದೆ. ಇದನ್ನು ಸಾಕುವುದು ದುಬಾರಿ ವೆಚ್ಚವಾದರೂ ಹೆಚ್ಚು ಲಾಭದಾಯಕ ಎಂದು ತಿಳಿದು ಈ ಮೀನಿನ ಕೃಷಿಗೆ ಕೈ ಹಾಕಿದರು.