ವಿಜಯಪುರ:8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಶ್ವವಿಖ್ಯಾತ ಗೋಲಗುಮ್ಮಟದ ಆವರಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಉಸ್ತುವಾರಿ ಸಚಿವ ಉಮೇಶ ಕತ್ತಿ ಯೋಗ ಮಾಡುವ ಮೂಲಕ ಚಾಲನೆ ನೀಡಿದರು. ಸುಮಾರು ಐದು ಸಾವಿರಕ್ಕಿಂತ ಹೆಚ್ಚು ಜನರು ಪಾಲ್ಗೊಂಡಿದ್ದರು.
ವಿದ್ಯಾರ್ಥಿಗಳು ಬಿಳಿ ಟೀ ಶರ್ಟ್ ಧರಿಸಿ ಸಂಭ್ರಮದಲ್ಲಿ ಭಾಗಿಯಾದರು. ಮೊದಲು ನಾಡಗೀತೆ ಹಾಡುವ ಮೂಲಕ ಯೋಗ ದಿನಕ್ಕೆ ಚಾಲನೆ ನೀಡಲಾಯಿತು. ನಂತರ ಮೈಸೂರಿನ ಅರಮನೆ ಮೈದಾನದಲ್ಲಿ ನಡೆದ ಯೋಗ ದಿನಾಚರಣೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುವುದನ್ನು ನೇರವಾಗಿ ವೀಕ್ಷಣೆ ಮಾಡಲಾಯಿತು. ಬಳಿಕ ಯೋಗ ಗುರುಗಳಿಂದ ಏಕಕಾಲದಲ್ಲಿ ಗುಮ್ಮಟದ ಆವರಣದಲ್ಲಿ ವಿವಿಧ ಆಸನಗಳನ್ನು ಮಾಡಲಾಯಿತು.
ಗೋಲಗುಮ್ಮಟ ಆವರಣದಲ್ಲಿ ಯೋಗ ದಿನಾಚರಣೆ ಕೇಂದ್ರ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ, ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಎಸ್ಪಿ ಆನಂದಕುಮಾರ, ಜಿಪಂ ಸಿಇಒ ರಾಹುಲ್ ಶಿಂಧೆ ಸೇರಿದಂತೆ ಹಲವು ಗಣ್ಯರಿದ್ದರು.
ಸುಸ್ತಾದ ಸಚಿವರು:ಯೋಗಾಸನ ಮಾಡುವಾಗ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಸ್ವಲ್ಪ ಸುಸ್ತಾಗಿದ್ದು ಕಂಡುಬಂತು. ಹೀಗಾಗಿ ಯಾವುದೇ ಕಠಿಣ ಆಸನಗಳನ್ನು ಮಾಡುವ ಗೋಜಿಗೆ ಹೋಗಲಿಲ್ಲ. ಎಲ್ಲರೂ ಯೋಗಾಸನ ಮಾಡುವಾಗ ಸಚಿವರು ಸುಮ್ಮನೆ ಕುಳಿತಿದ್ದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಭಗವಂತ ಖೂಬಾ, "ಪ್ರಧಾನಿ ಮೋದಿಯವರ ಆಶಯದಂತೆ ದೇಶದ 75 ಪಾರಂಪರಿಕ ಸ್ಮಾರಕಗಳಲ್ಲಿ ಯೋಗ ದಿನಾಚರಣೆ ಆಚರಿಸುತ್ತಿದ್ದೇವೆ. ಅದರಲ್ಲಿ ವಿಜಯಪುರದ ಗೋಲಗುಮ್ಮಟ ಸಹ ಸೇರಿರುವುದು ಜಿಲ್ಲೆಯ ಜನತೆಯ ಹೆಮ್ಮೆಗೆ ಕಾರಣವಾಗಿದೆ. ಯೋಗ ದಿನಾಚರಣೆ ಸಂಪೂರ್ಣ ಯಶಸ್ವಿಯಾಗಿದೆ" ಎಂದರು.