ವಿಜಯಪುರ :ಜಿಲ್ಲೆಯ ಮುಖ್ಯ ಬೆಳೆ ತೊಗರಿಗೆ ಹಳದಿ ರೋಗ ಕಾಣಿಸಿದೆ. ಹಳದಿ ಬಣ್ಣಕ್ಕೆ ತಿರುಗಿ ಒಣಗುತ್ತಿರೋ ಬೆಳೆ ಕಂಡು ರೈತ ಕಂಗಾಲಾಗಿದ್ದಾನೆ. ಕಳೆದ ವರ್ಷ ತೊಗರಿ ಉತ್ತಮ ಇಳುವರಿ ನೀಡುವ ಮೂಲಕ ರೈತನ ಸಂತಸಕ್ಕೆ ಕಾರಣವಾಗಿತ್ತು.
ಆದರೆ, ಈ ವರ್ಷ ತೊಗರಿ ನಂಬಿ ಶೇ.80ರಷ್ಡು ಕೃಷಿ ಜಮೀನಿನಲ್ಲಿ ತೊಗರಿ ಬೆಳೆದಿದ್ದ ರೈತನಿಗೆ ಆಘಾತ ಮೂಡಿಸಿದೆ. ಜೂನ್, ಜುಲೈನಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾದ ಪರಿಣಾಮ ಮತ್ತೊಮ್ಮೆ ತೊಗರಿ ಬಂಪರ್ ಕೊಡುಗೆ ನೀಡುತ್ತೆ ಎಂದು ಕಾದು ಕುಳಿತಿದ್ದ ರೈತರಿಗೆ ಸೆಪ್ಟೆಂಬರ್ನಲ್ಲಿ ಸುರಿದ ಮಳೆ ತಣ್ಣೀರೆರಚಿದೆ.
ವಿಜಯಪುರ ರೈತರಿಗೆ ವರುಣನ ಕಾಟ ಜಿಲ್ಲೆಯಲ್ಲಿ ಒಟ್ಟು 4.85 ಲಕ್ಷ ಹೆಕ್ಟೇರ್ ಪ್ರದೇಶ ಕೃಷಿ ಭೂಮಿ ಹೊಂದಿದೆ. ಅದರಲ್ಲಿ ಈ ವರ್ಷ 3.67 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೇವಲ ತೊಗರಿ ಬೆಳೆಯಲಾಗಿದೆ. ಸೆಪ್ಟೆಂಬರ್ ಅಂತ್ಯದೊಳಗೆ ಜಿಲ್ಲೆಯಲ್ಲಿ 684 ಮಿ.ಮೀಟರ್ ಮಳೆಯಾಗಿದೆ. ನಿರೀಕ್ಷಿತ ಮಳೆ ಪ್ರಮಾಣಕ್ಕಿಂತ ಶೇ.102ರಷ್ಟು ಹೆಚ್ಚುವರಿ ಮಳೆಯಾಗಿದೆ.
ಕಪ್ಪು ಮಣ್ಣಿನಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಅವಕಾಶವಿಲ್ಲದ ಭೂಮಿಯಲ್ಲಿ ಅತಿ ಹೆಚ್ಚು ತೊಗರಿ ನಷ್ಟವಾಗಿದೆ. ಸದ್ಯ ರೋಗ ತಗುಲಿದ ತೊಗರಿ ಬೆಳೆಯನ್ನು ಲೆಕ್ಕ ಹಾಕಲಾಗುತ್ತಿದೆ. ಅಲ್ಲದೆ ನೀರು ನಿಲ್ಲದ ಹಾಗೆ ಒಡ್ಡು ತೆಗೆದು ನೀರು ಹೊರ ಬಿಟ್ಟು ಉಳಿದ ತೊಗರಿ ಬೆಳೆ ಉಳಿಸಿಕೊಳ್ಳುವಂತೆ ಕೃಷಿ ಇಲಾಖೆ ಮನವಿ ಮಾಡಿದೆ.
15 ಸಾವಿರ ಹೆಕ್ಟೇರ್ ಪ್ರದೇಶದ ವಿವಿಧ ಬೆಳೆ ನಾಶ :ಕೃಷಿ ಇಲಾಖೆಯ ಅಂದಾಜು ಸಮೀಕ್ಷೆಯಂತೆ 15ಸಾವಿರ ಹೆಕ್ಟೇರ್ ಪ್ರದೇಶದ ವಿವಿಧ ಬೆಳೆಗಳು ಹಾಳಾಗಿವೆ. ಇದರಲ್ಲಿ ಸಿಂಹಪಾಲು ತೊಗರಿಯದ್ದಾಗಿದೆ. 60 ಕೋಟಿ ರೂ. ಗಿಂತ ಹೆಚ್ಚು ಬೆಳೆ ನಷ್ಟವಾಗಿದೆ. ಈ ವರದಿಯನ್ನು ಕೃಷಿ ಇಲಾಖೆ, ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ.
ಇದರ ಜತೆ ಸಂಪೂರ್ಣ ಬೆಳೆ ನಾಶವಾದ ಬೆಳೆ ವಿಮೆ ಮಾಡಿಸಿರುವ ರೈತರಿಗೆ ಪರಿಹಾರ ನೀಡಲು ಆನ್‌ಲೈನ್ ಅರ್ಜಿ ಸಹ ಆಹ್ವಾನಿಸಿದೆ. ಈಗ ಬೆಳೆ ನಷ್ಟವಾದ ರೈತರು ಸರ್ಕಾರದ ಪರಿಹಾರಕ್ಕಾಗಿ ಚಾತಕ ಪಕ್ಷಿಯಂತೆ ಕಾಯಬೇಕಾಗಿದೆ.