ವಿಜಯಪುರ:ಪಕ್ಷದ ಹಿರಿಯರು ನನಗೆ ನಗರ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಮತ್ತೊಮ್ಮೆ ಅವಕಾಶ ನೀಡಿದ್ದಾರೆ. ಇದಕ್ಕೆ ಪಕ್ಷದ ಕಾರ್ಯಕರ್ತರು ಮುಖಂಡರು ಕಾರಣ. ನಮ್ಮ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕೆಲಸ ಕಾಮಗಾರಿ ಮಾಡಲಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ಗುರುಕುಲ ರಸ್ತೆಯಲ್ಲಿರುವ ಪ್ರಚಾರ ಕಾರ್ಯಾಲಯ ಉದ್ಘಾಟಿಸಲು ಆಗಮಿಸಿದ್ದ ಅವರು, ಮೊದಲು ಗೋಮಾತೆ ಪೂಜೆ ನೆರವೇರಿಸಿ, ಹೋಮ ಹವನ ನಡೆಸಿ, ವಿಘ್ನೇಶ್ವರನಿಗೆ ಪೂಜೆ ಸಲ್ಲಿಸಿದರು. ಬಳಿಕ ಬಿಜೆಪಿ ಪದಾಧಿಕಾರಿಗಳು ಹಾಗೂ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊರೊನಾ ಲಸಿಕೆಯನ್ನು ದಾಖಲೆ ಪ್ರಮಾಣದಲ್ಲಿ ಹಾಕಲಾಯಿತು. ಹಿಂದುತ್ವದ ಜೊತೆ ಅಭಿವೃದ್ಧಿ ಕೆಲಸ ಕಾರ್ಯ ಮಾಡಿದ್ದೇನೆ. ಅಲ್ಪಸಂಖ್ಯಾತರು ಹೆಚ್ಚಿರುವ ಕ್ಷೇತ್ರದಲ್ಲಿ ಆಯ್ಕೆಯಾಗುವುದು ಸರಳವಲ್ಲ. ಹಿಂದೂಯೇತರ ಅಭ್ಯರ್ಥಿಗಳಿಗೆ ಬೆಂಬಲಿಸುವವರು ಇಲ್ಲ. ಎಲ್ಲರೂ ಬಿಜೆಪಿಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಕೆಲವರು ನಮ್ಮ ಜೊತೆ ಆಟವಾಡುತ್ತಿರುತ್ತಾರೆ. ಯಾರು ಯಾರ ಗಾಡಿಯಲ್ಲಿ ತಿರುಗಾಡುತ್ತಾರೆ ಎಂಬುದು ನನಗೆ ಗೊತ್ತು. ಕಾಂಗ್ರೆಸ್ ಅಭ್ಯರ್ಥಿ ವಾಹನದಲ್ಲಿ ಯಾರು ಓಡಾಡುತ್ತಾರೆ ಗೊತ್ತು ಎಂದು ವಿರೋಧಿಗಳಿಗೆ ಟಾಂಗ್ ನೀಡಿದರು. ಸರಳವಾಗಿ ನಾಮಪತ್ರ ಸಲ್ಲಿಸುವೆ ಎಂದ ಅವರು, ನಮ್ಮ ಹಿಂದೂ ಸಮಾಜದ ಮತದಾರರು ನೂರಕ್ಕೆ ನೂರರಷ್ಟು ಮತದಾನ ಮಾಡಬೇಕು. ಪ್ರಚಾರದ ವೇಳೆ ನನಗೆ ಯಾರೂ ಹಾರ ಹಾಕುವುದು ಬೇಡ ಎಂದು ಸ್ಪಷ್ಟಪಡಿಸಿದರು.
ಮೇ 13 ರಂದು ವಿಜಯೋತ್ಸವ ಮಾಡೋಣ. ಅಧಿಕ ಮತಗಳಿಂದ ಆಯ್ಕೆಯಾಗುವುದು ಖಚಿತ ಎಂದು ಗೆಲ್ಲೋ ಭರವಸೆ ವ್ಯಕ್ತಪಡಿಸಿದ ಯತ್ನಾಳ, ಇಲ್ಲಿ ಬಿಜೆಪಿ ಬರಲಿಲ್ಲ ಎಂದರೆ ಜನರು ಜೀವನ ಮಾಡುವುದಕ್ಕೆ ಆಗುವುದಿಲ್ಲ ಎಂದು ಪರೋಕ್ಷವಾಗಿ ವಿರೋಧಿಗಳಿಗೆ ಟಾಂಗ್ ನೀಡಿದರು. ಇದು ವಿಜಯಪುರ ನಗರದ ಪ್ರತಿಷ್ಠೆಯ ಚುನಾವಣೆ ಆಗಿದೆ. ಇಡೀ ರಾಜ್ಯವೇ ನಗರದತ್ತ ನೋಡುತ್ತಿದೆ. ಮತದಾರರು ಬಿಜೆಪಿಗೆ ಹೆಚ್ಚಿನ ಮತ ಹಾಕಬೇಕು. ನಾನು ರಾಜ್ಯದ ಇತರೆಡೆ ಕೆಲ ದಿನ ಪ್ರಚಾರಕ್ಕೆ ಹೋಗಬೇಕಿದೆ. ನೀವೇ ಯತ್ನಾಳ ಎಂದು ತಿಳಿದುಕೊಂಡು ಪ್ರಚಾರ ಮಾಡಿ. ಮೋದಿ ಇಲ್ಲದಿದ್ದರೆ ದೇಶ ಇರಲ್ಲ ಎಂದು ಪ್ರಧಾನಿ ಬಗ್ಗೆ ಯತ್ನಾಳ ಮೆಚ್ಚುಗೆ ವ್ಯಕ್ತಪಡಿಸಿದರು.
ಓದಿ:ವಿಜಯಪುರ ನಗರ ಕ್ಷೇತ್ರಕ್ಕೆ ಯತ್ನಾಳ್.. ಪಟ್ಟಣಶೆಟ್ಟಿಗೆ ಕೈ ತಪ್ಪಿದ ಟಿಕೆಟ್
ರಾಜ್ಯದ ಹೈವೋಲ್ಟೇಜ್ ವಿಧಾನಸಭಾ ಕ್ಷೇತ್ರಗಳಲ್ಲಿ ವಿಜಯಪುರ ನಗರವೂ ಒಂದು. ಐತಿಹಾಸಿಕ ಸ್ಮಾರಕಗಳ ನಗರದ ಕದನ ಕಣವೇ ಬಲು ರೋಚಕವಾಗಿದೆ. ರಾಜ್ಯದಲ್ಲಿ ಬೇರೆ ಬೇರೆ ಕಾರಣದಿಂದಾಗಿ ಚುನಾವಣೆ ನಡೆದರೆ, ಇಲ್ಲಿ ಮಾತ್ರ ವಿಭಿನ್ನ ರಾಜಕಾರಣ ನಡೆಯುತ್ತಿರುತ್ತದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರಿಂದಾಗಿ ಈ ಕ್ಷೇತ್ರ ಹೆಚ್ಚು ಗಮನ ಸೆಳೆಯುತ್ತಿರುತ್ತದೆ. ಈ ಹಿಂದೆ ಬಿಜೆಪಿಯಿಂದ ಟಿಕೆಟ್ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ಯತ್ನಾಳ, 2018ರಲ್ಲಿ ಬಿಜೆಪಿ ಟಿಕೆಟ್ ಪಡೆದು ವಿಜಯಪುರ ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಸುಮಾರು 7 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ವಿರುದ್ಧ ಗೆಲುವು ಸಾಧಿಸಿದ್ದರು. ಇದೀಗ ಮತ್ತೆ ಚುನಾವಣೆ ಅಖಾಡ ರೆಡಿಯಾಗಿದ್ದಾರೆ ಶಾಸಕ ಬಸನಗೌಡ ಪಾಟೀಲ ಯತ್ನಾಳ.