ಅಥಣಿ: ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಸಮಾಜಕ್ಕಾಗಿ ಮಂತ್ರಿ ಪದವಿಯನ್ನು ತ್ಯಾಗಮಾಡಿ ಸಮಾಜದ ಏಳ್ಗೆಗಾಗಿ ಶ್ರಮಿಸುತ್ತಿದ್ದಾರೆ ಎಂದು ಪಂಚಮಸಾಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಅಥಣಿ ಮುರುಘೇಂದ್ರ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವ ಹಾಗೂ ಶಿವಬಸವ ಸ್ವಾಮೀಜಿ ಪಟ್ಟಾಭಿಷೇಕ ಕಾರ್ಯಕ್ರಮದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದರು.
ಬಸನಗೌಡ ಪಾಟೀಲ ಯತ್ನಾಳ್ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ವಿಚಾರದಲ್ಲಿ ಮಂತ್ರಿ ಸ್ಥಾನ ಪಡೆದಿಲ್ಲ. ಅವರು ಮಂತ್ರಿ ಪದವಿ ಪಡೆದು ಮೀಸಲಾತಿ ಕೊಡಿಸುವ ಮೂಲಕ ಸಮಾಜವನ್ನು ಮೇಲೆತ್ತುವ ಕೆಲಸ ಮಾಡಬೇಕು ಎಂದು ಸಲಹೆ ಕೊಟ್ಟರು.
ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ. ಆದಷ್ಟು ಬೇಗ ಮೀಸಲಾತಿ ನೀಡದೇ ಹೋದರೆ ಹಾವೇರಿಯ ಶಿಗ್ಗಾಂವಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆಮುಂದೆ ಸಮಾಜದ ಸಾವಿರಾರು ಬಾಂಧವರಿಂದ ಧರಣಿ ಸತ್ಯಾಗ್ರಹ ನಡೆಸುವ ಯೋಜನೆ ರೂಪಿಸಲಾಗಿದೆ ಎಂದು ಎಚ್ಚರಿಸಿದರು.
ಕೇಂದ್ರ ಸರ್ಕಾರ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಲು ಒಲವು ಹೊಂದಿದೆ. ಆದರೆ ರಾಜ್ಯ ಸರ್ಕಾರ ಹಳೇ ಮೈಸೂರು ಭಾಗದ ಓರ್ವ ವ್ಯಕ್ತಿ ಹಾಗೂ ನಮ್ಮಲ್ಲಿರುವ ಒಬ್ಬ ವ್ಯಕ್ತಿಯಿಂದ ಸಮಾಜಕ್ಕೆ ಮೀಸಲಾತಿ ನೀಡಲು ಹಿಂದೇಟು ಹಾಕುತ್ತಿದೆ. ಬೊಮ್ಮಾಯಿ ಅವರು ಯಾಕೆ ಮೌನವಾಗಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಒಂದು ವೇಳೆ 2ಎ ಮೀಸಲಾತಿ ನೀಡದಿದ್ದರೆ ಬೆಂಗಳೂರಿನಲ್ಲಿ 25 ಲಕ್ಷ ಜನರನ್ನು ಸೇರಿಸಿ ಬೃಹತ್ ಪ್ರತಿಭಟನೆ ಮಾಡಲಾಗುವುದೆಂದು ಶ್ರೀಗಳು ಹೇಳಿದರು.
ಇದನ್ನೂ ಓದಿ:ಪರಿಷತ್ ಚುನಾವಣೆಗೆ ಕಣಕ್ಕಿಳಿದ 7 ಅಭ್ಯರ್ಥಿಗಳ ಆಸ್ತಿ ವಿವರ: ಬಹುತೇಕರು ಕೋಟ್ಯಧಿಪತಿಗಳೇ!