ಮುದ್ದೇಬಿಹಾಳ: ಕಾನೂನು ಕ್ರಮಕ್ಕೆ ವಿರೋಧವಾಗಿ ಚಿಕ್ಕ ವಯಸ್ಸಿಗೆ ಮದುವೆ ಮಾಡಿದರೆ ಶಿಕ್ಷಾರ್ಹ ಅಪರಾಧವಾಗಿದ್ದು, ಅಂಥವರಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ರಾಜೇಶ್ವರಿ ಗೋಲಗೇರಿ ಹೇಳಿದರು.
ಪಟ್ಟಣದ ತಾಲೂಕಾ ಆರೋಗ್ಯ ಇಲಾಖೆಯ ಕಚೇರಿಯ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜನಸಂಖ್ಯಾ ಹೆಚ್ಚಳದಿಂದ ದೇಶದಲ್ಲಿ ಆರ್ಥಿಕ ಮಾತ್ರವಲ್ಲದೇ ವಿವಿಧ ಸಂಕಷ್ಟಗಳು ಎದುರಾಗುತ್ತವೆ. ಇಲಾಖೆಯು ಜನಸಂಖ್ಯಾ ನಿಯಂತ್ರಣ ವಿಧಾನಗಳನ್ನು ಹೊರತಂದಿದೆ. ಇದಕ್ಕಾಗಿ ಸರ್ಕಾರದಿಂದ ಆರೋಗ್ಯ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಂದ ಸಾಕಷ್ಟು ಜನಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು ಜಾಗೃತಿಗೊಳ್ಳುವುದು ಅವಶ್ಯಕವಾಗಿದೆ ಎಂದರು.