ವಿಜಯಪುರ: ಇಂದು ವಿಶ್ವ ಹೃದಯ ದಿನ ಹಿನ್ನೆಲೆ ವಿಜಯಪುರ ನಗರದಲ್ಲಿ ಹೃದಯದ ಕುರಿತು ಅರಿವು ಮೂಡಿಸುವ ಅಭಿಯಾನ ನಡೆಯಿತು.
ನಗರದ ಬೇಗಂ ತಲಾಬ್ನಲ್ಲಿ ವಿಜಯಪುರ ಸೈಕ್ಲಿಂಗ್ ಗ್ರೂಪ್, ಹೆಲ್ತ್‌ಲೈನ್ ಫಿಟ್ನೆಸ್ ಹಾಗೂ ವಿಜಯಪುರ ಅಡ್ವೆಂಚರ್ ಬೈಕ್ಸ್ ಸಹಯೋಗದೊಂದಿಗೆ ಹೃದಯ ದಿನ ಆಚರಿಸಲಾಯಿತು. ಈ ಅಭಿಯಾನದಲ್ಲಿ ನೂರಾರು ಸೈಕ್ಲಿಂಗ್ ಸದಸ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. ಖ್ಯಾತ ಹೃದಯರೋಗ ತಜ್ಞ ಡಾ.ಕಿರಣ್ ಚುಳಕಿ ಹಾಗೂ ಡಾ.ಹರೀಶ ಪೂಜಾರಿ ಹೃದಯದ ಬಗ್ಗೆ ಅರಿವು ಮೂಡಿಸಿದರು.
ಡಾ. ಕಿರಣ ಚುಳಕಿ ಮಾತನಾಡಿ, ದೇಶದಲ್ಲಿ ನೂರಕ್ಕೆ ಶೇ.40ರಷ್ಟು ಜನರು ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಡುತ್ತಿದ್ದಾರೆ. ಹೀಗಾಗಿ, ಜನರಿಗೆ ಹೃದಯದ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಆರೋಗ್ಯಕ್ಕೆ ಪೂರಕ ಆಹಾರ ಸೇವಿಸುವುದು. ಚೆನ್ನಾಗಿ ನೀರು ಕುಡಿಯುವುದು, ದಿನನಿತ್ಯ ವ್ಯಾಯಾಮ, ಧೂಮಪಾನ ನಿಲ್ಲಿಸುವುದು ಸೇರಿ ಕೆಲ ಸಣ್ಣ ಸಣ್ಣ ಬದಲಾವಣೆಗಳನ್ನು ಮಾಡಿದ್ರೆ ಸಾಕು ನಮ್ಮ ಆರೋಗ್ಯ ನಾವು ಕಾಪಾಡಬಹುದು ಎಂದರು.
ಈ ವೇಳೆ ಮಾತನಾಡಿದ ವಿಜಯಪುರ ಸೈಕ್ಲಿಂಗ್ ಗ್ರೂಪ್ ಸಂಚಾಲಕ ಡಾ.ಮಹಾಂತೇಶ ಬಿರಾದಾರ, ಇತ್ತೀಚೆಗೆ ಯುವ ಪೀಳಿಗೆಯಲ್ಲೇ ಹೃದಯದ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಹೃದಯವೇ ಕೆಲಸ ನಿಲ್ಲಿಸಿಬಿಟ್ಟರೆ ಮನುಷ್ಯನಿಲ್ಲ. ಹೀಗಾಗಿ, ವಾಯು ಮಾಲಿನ್ಯವೂ ಹೃದಯದ ಸಮಸ್ಯೆಗೆ ಕಾರಣವಾಗುತ್ತೆ, ಪರಿಸರ ರಕ್ಷಣೆಯೂ ಜೊತೆ ಜೊತೆಗೆ ನಡೆಯಬೇಕು ಎಂದರು.