ಮಹಿಳಾ ವಿವಿ ಕುಲಪತಿ ಪ್ರ. ತುಳಸಿಮಾಲಾ ವಿಜಯಪುರ :ರಾಜ್ಯದ ಏಕೈಕ ಮಹಿಳಾ ವಿಶ್ವ ವಿದ್ಯಾನಿಲಯವಾಗಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಹಲವಾರು ಸಮಸ್ಯೆಗಳ ನಡುವೆ ಮಹಿಳಾ ಸಬಲೀಕರಣದ ಜೊತೆಗೆ ಮಹಿಳೆಯರನ್ನು ಶೈಕ್ಷಣಿಕವಾಗಿ ಸಶಕ್ತರನ್ನಾಗಿ ಮಾಡುತ್ತಿದೆ. ಇದರ ನಡುವೆ ಹಲವಾರು ಸಾಧನೆ ಮಾಡುತ್ತಿದ್ದು, ಈ ಸಾಧನೆಗಳ ಪಟ್ಟಿಗೆ ಸೋಲಾರ್ ವಿದ್ಯುತ್ ಉತ್ಪಾದನೆಯೂ ಒಂದಾಗಿದೆ.
ಮಹಿಳಾ ವಿವಿಯಲ್ಲಿ 2019 ರಲ್ಲಿ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆ ಮಾಡಲಾಗಿದ್ದು, ಇಲ್ಲಿ ನಿತ್ಯ ಸರಾಸರಿ 650 ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಯೋಜನೆಯಲ್ಲಿ ಚೆನ್ನೈ ಮೂಲದ ಕ್ಲೀನ್ ಮ್ಯಾಕ್ಸ್ ನೆವೀರೋ ಪ್ರೈವೇಟ್ ಲಿಮಿಟೆಡ್ ಇಲ್ಲಿ ಸೋಲಾರ್ ಪ್ಯಾನೆಲ್‌ಗಳನ್ನು ಹಾಕಿ ವಿದ್ಯುತ್ ಉತ್ಪಾದನೆ ಮಾಡುತ್ತಿದೆ. ವಿವಿ ಆವರಣದಲ್ಲಿರುವ ಸೈನ್ಸ್ ಹಾಗೂ ಸೋಷಿಯಲ್ ಸೈನ್ಸ್ ವಿಭಾಗಗಳ ಕಟ್ಟಡಗಳ ಮೇಲ್ಛಾವಣಿಯಲ್ಲಿ ಸುಮಾರು 2400 ಸ್ಕ್ವೇರ್ ಫೀಟ್ ಜಾಗದಲ್ಲಿ ಸೋಲಾರ್ ಪ್ಯಾನೆಲ್‌ಗಳನ್ನು ಅಳವಡಿಸಲಾಗಿದೆ. ಇನ್ನುಳಿದಂತೆ ಇದಕ್ಕೆ ಬೇಕಾದ ಪರಿಕರಗಳನ್ನು ಹಾಕಲಾಗಿದೆ.
ನಿತ್ಯ 650 ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ಅದನ್ನು ವಿವಿಯಲ್ಲೇ ಉಪಯೋಗಿಸಲಾಗುತ್ತಿದೆ. ಹೆಚ್ಚುವರಿ ವಿದ್ಯುತ್ನ್ನು ಹೆಸ್ಕಾಂ ಗ್ರಿಡ್ಗೆ ಸರಬರಾಜು ಮಾಡಲಾಗುತ್ತದೆ. ಶನಿವಾರ ಹಾಗೂ ಭಾನುವಾರ ಸೇರಿದಂತೆ ರಜಾ ದಿನಗಳಲ್ಲಿ ಉಳಿತಾಯವಾಗುವ ವಿದ್ಯುತ್ ಗ್ರಿಡ್ಗೆ ಸರಬರಾಜಾಗುವ ಮೂಲಕ ಹೆಸ್ಕಾಂಗೆ ಹೋಗುತ್ತಿದೆ. ಇದು ಒಂದು ರೀತಿಯಲ್ಲಿ ವಿವಿಗೆ ನಷ್ಟವಾಗುತ್ತಿದೆ. ಕಾರಣ ಸೋಲಾರ್ ಮೂಲಕ ಉತ್ಪಾದನೆಯಾಗುವ ಪ್ರತಿ ಯೂನಿಟ್ ಗೆ ವಿವಿಯಿಂದ 3.83 ರೂ. ಗಳಂತೆ ಹೆಸ್ಕಾಂಗೆ ನೀಡಲಾಗುತ್ತಿದೆ. ಜೊತೆಗೆ ಇಲ್ಲಿ ಹೆಚ್ಚುವರಿಯಾಗಿ ಉಳಿದಿರೋ ಸೋಲಾರ್ ವಿದ್ಯುತ್ಅನ್ನು ಹೆಸ್ಕಾಂಗೆ ಅದೇ ದರಕ್ಕೆ ಮಾರಾಟ ಮಾಡಲಾಗುತ್ತಿದೆ.
ಇನ್ನುಳಿದಂತೆ ಸೋಲಾರ್ ಹೊರತಾಗಿಯೂ ಹೆಸ್ಕಾಂನಿಂದ ಪಡೆಯೋ ವಿದ್ಯುತ್ ಗೆ 7.50 ರೂ. ಗಳನ್ನು ನೀಡಲಾಗುತ್ತಿದೆ. ಇದು ಒಂದು ರೀತಿಯಲ್ಲಿ ಕಡಿಮೆ ದರಕ್ಕೆ ಪೂರೈಕೆ ಮಾಡಿ ಹೆಚ್ಚಿನ ದರಕ್ಕೆ ವಿದ್ಯುತ್ ಅನ್ನು ಪಡೆಯುವಂತಾಗಿದೆ. ಸದ್ಯ ಲಕ್ಷಾಂತರ ಹಣ ಖರ್ಚು ಮಾಡಿ ಮಹಿಳಾ ವಿವಿಯಲ್ಲಿ ಸೋಲಾರ್ ವಿದ್ಯುತ್ ಉತ್ಪಾದನಾ ಕೇಂದ್ರವಿದ್ದರೂ ಸಹ ಪ್ರತಿ ತಿಂಗಳು ಹೆಸ್ಕಾಂಗೆ ಸಾವಿರಾರು ರೂಪಾಯಿ ಹಣವನ್ನು ಬಿಲ್ ರೂಪದಲ್ಲಿ ನೀಡಲಾಗುತ್ತಿದೆ. ಕಳೆದ ತಿಂಗಳು ಹೆಸ್ಕಾಂಗೆ 5 ಲಕ್ಷಕ್ಕೂ ಅಧಿಕ ಬಿಲ್ ಪಾವತಿ ಮಾಡಿದೆ. ವಿದ್ಯುತ್ ದರ ಏರಿಕೆಯ ಕಾರಣ ಹೆಚ್ಚು ಬಿಲ್ ಬಂದಿತ್ತು.
ಈ ಕುರಿತು ಮಹಿಳಾ ವಿವಿ ಕುಲಪತಿಗಳಾದ ಪ್ರೊ. ತುಳಸಿಮಾಲಾ ಅವರು ಮಾತನಾಡಿ, ಹಿಂದೆ ಸೋಲಾರ್ ವಿದ್ಯುತ್ ಬಗ್ಗೆ ಒಂದು ಒಪ್ಪಂದವಾಗಿತ್ತು. ಅದರ ಅನ್ವಯ ವಿದ್ಯುತ್ ಖರೀದಿ ಮಾಡುವ ಒಪ್ಪಂದದಲ್ಲಿ ಒಪ್ಪಿತ ದರದಲ್ಲಿ ವಿದ್ಯುತ್ನ್ನು ಹೆಸ್ಕಾಂಯಿಂದ ಖರೀದಿ ಮಾಡುವುದು ಎಂದು ಆಗಿದೆ. ನಮ್ಮಲ್ಲಿ ಈಗಾಗಲೇ ಪ್ಯಾನಲ್ಗಳನ್ನು ಹಾಕಿದ್ದಾರೆ. ಆದರೇ ಅವರಿಂದ ಖರೀದಿಸುವ ವಿದ್ಯುತ್ ದರ ಹೆಚ್ಚಿದ್ದು, ನಾವು ಅವರಿಗೆ ನೀಡುವ ವಿದ್ಯುತ್ ದರ ಕಡಿಮೆ ಇದೆ. ಹಾಗಾಗಿ ಪವರ್ ಪರ್ಸ್ಸಿಂಗ್ ಅಗ್ರೀಮೆಂಟ್ ಮತ್ತು ಸೆಕಿ ಏಜೆನ್ಸಿ ಜೊತೆ ಮಾಡಿಕೊಂಡಿರುವ ಒಪ್ಪಂದವನ್ನು ಪುನರ್ ವಿಮರ್ಶೆ ಮಾಡಬೇಕು ಎಂದು ನಾನು ಹೇಳಿದ್ದೇನೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಿದ್ದಪಡಿಸಿದ್ದು, ಅದನ್ನು ಪರಿಶೀಲನೆ ಮಾಡಿ ನಮ್ಮ ವಿವಿಗೆ ಅನುಕೂಲವಾಗುವಂತೆ ಇದ್ದಾರೆ ಮಾತ್ರ ನಾವು ಮುಂದುವರೆಸುತ್ತೇವೆ. ಇಲ್ಲ ನಾವು ಆ ಒಪ್ಪಂದವನ್ನು ರದ್ದು ಮಾಡುತ್ತೇವೆ ಎಂದು ತಿಳಿಸಿದರು.
ಕಡಿಮೆ ದರದಲ್ಲಿ ಉತ್ಪಾದನೆ ಮಾಡುವ ಸೋಲಾರ್ ವಿದ್ಯುತ್ ಅನ್ನು ಹೆಸ್ಕಾಂಗೆ ನೀಡಿ ಹೆಸ್ಕಾಂನಿಂದ ಬಳಕೆ ಮಾಡುವ ವಿದ್ಯುತ್ಗೆ ಹೆಚ್ಚಿನ ದರ ನೀಡುವ ಅನಿವಾರ್ಯತೆ ಮಹಿಳಾ ವಿವಿಗಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಈ ಸಮಸ್ಯೆಗೆ ಪರಿಹಾರ ನೀಡಬೇಕಿದೆ. ಕಡಿಮೆ ದರಕ್ಕೆ ಸೋಲಾರ್ ವಿದ್ಯುತ್ ನೀಡಿ ಹೆಚ್ಚಿನ ದರಕ್ಕೆ ಹೆಸ್ಕಾಂನಿಂದ ವಿದ್ಯುತ್ ಪಡೆಯೋದಕ್ಕೆ ಬ್ರೇಕ್ ಹಾಕಿ ತಮ್ಮ ಸಂಪೂರ್ಣ ವಿದ್ಯುತ್ ಅನ್ನು ತಾವೇ ಬಳಸಿಕೊಂಡರೆ ಇದು ಮಹಿಳಾ ವಿವಿ ಗೆ ಲಾಭವಾಗುವುದರಲ್ಲಿ ಸಂಶಯವಿಲ್ಲ.
ಇದನ್ನೂ ಓದಿ :ಯಾವುದೇ ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿಲ್ಲ: ವಿಜಯಪುರ ಮಹಿಳಾ ವಿವಿ ಪ್ರಕಟಣೆ