ವಿಜಯಪುರ :ಆಯತಪ್ಪಿ ಕಾಲುವೆಯಲ್ಲಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಿಸಲು ಮಹಿಳೆಯೊಬ್ಬಳು ತನ್ನ ಮಾನಕ್ಕೂ ಹೆದರದೇ ಉಟ್ಟ ಸೀರೆ ಬಿಚ್ಚಿ ಕೊಟ್ಟು ಆತನನ್ನು ರಕ್ಷಣೆ ಮಾಡಿರುವ ಅಪರೂಪದ ಮಾನವೀಯ ಘಟನೆ ಜಿಲ್ಲೆಯ ಆಲಮಟ್ಟಿಯಲ್ಲಿ ನಡೆದಿದೆ.
ಕಾಲುವೆಯಲ್ಲಿ ಮುಳುಗುತ್ತಿದ್ದ ಬಾಲಕ: ಮಾನಕ್ಕೆ ಅಂಜದೆ ಉಟ್ಟ ಸೀರೆಯನ್ನೇ ಬಿಚ್ಚಿ ರಕ್ಷಣೆ ಮಾಡಿದ ಮಹಿಳೆ! - boy rescue in Vijayapura
ಕಾಲುವೆಯಲ್ಲಿ ಮುಳುಗುತ್ತಿದ್ದ ಬಾಲಕನನ್ನು ಮಹಿಳೆಯೊಬ್ಬಳು ತನ್ನ ಸೀರೆ ಕೊಟ್ಟು ರಕ್ಷಣೆ ಮಾಡಿದ ಘಟನೆ ಆಲಮಟ್ಟಿಯಲ್ಲಿ ನಡೆದಿದೆ.
ನಿಡಗುಂದಿ ತಾಲೂಕಿನ ಆಲಮಟ್ಟಿ ಎಡದಂಡೆ ಶಾಖಾ ಕಾಲುವೆಯ ಸಮೀಪದಲ್ಲಿ ಅರುಣ ದೊಡಮನಿ (6 ವರ್ಷ) ಎಂಬ ಬಾಲಕ ತನ್ನ ಸಹೋದರ ಪ್ರವೀಣ (8 ವರ್ಷ) ನೊಂದಿಗೆ ಬಹಿರ್ದೆಸೆಗೆ ಹೋಗಿದ್ದ. ಬಹಿರ್ದೆಸೆ ಮುಗಿಸಿ ನೀರಿಗಾಗಿ ಕಾಲುವೆಗೆ ಇಳಿದಿದ್ದ ಅರುಣ, ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದಾನೆ. ಅಲ್ಲಿಯೇ ಬಟ್ಟೆ ತೊಳೆಯುತ್ತಿದ್ದ ಸಕೀನಾಬೇಗಂ ರಜಾಸಾಬ್ ಕೊಡೆಕಲ್ಲ ಎನ್ನುವ ಮಹಿಳೆ ಬಾಲಕ ಮುಳುಗುತ್ತಿರುವದನ್ನು ಗಮನಿಸಿ ಪ್ರವೀಣಗೆ ತಿಳಿಸಿದ್ದಾಳೆ.
ಬಳಿಕ ಗಾಬರಿಯಿಂದ ಬಾಲಕನನ್ನು ರಕ್ಷಣೆ ಮಾಡುವಂತೆ ರಸ್ತೆಯಲ್ಲಿ ಅವರಿವರನ್ನು ಕೂಗಿದ್ದಾಳೆ. ಅಷ್ಟರಲ್ಲಿ ಮುಳುಗುತ್ತಿರುವ ಬಾಲನನ್ನು ನೋಡಿದ ದಾರಿಹೋಕರು ಇವರ ಸಹಾಯಕ್ಕೆ ಬಂದಿದ್ದಾರೆ. ಬಾಲಕನ ರಕ್ಷಣೆಗಾಗಿ ಹಗ್ಗ ಕೇಳಿದ್ದಕ್ಕೆ ಮಹಿಳೆ ಸಕೀನಾ ಕ್ಷಣ ಮಾತ್ರದಲ್ಲಿ ತಾನು ಉಟ್ಟಿದ್ದ ಸೀರೆಯನ್ನೇ ಬಿಚ್ಚಿ ಕೊಟ್ಟಿದ್ದಾಳೆ. ಅದನ್ನು ಬಳಸಿಕೊಂಡು ಶಿಕ್ಷಕ ಮಹೇಶ ಎಂಬುವರು ಅರುಣನನ್ನು ಮೇಲಕ್ಕೆ ತಂದಿದ್ದಾರೆ. ಬಳಿಕ ಹೊಟ್ಟೆಯಲ್ಲಿನ ನೀರು ಹೊರತಗೆದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಶಿಕ್ಷಕ ಮಹೇಶ ಅವರ ಸಮಯಪ್ರಜ್ಞೆ ಹಾಗೂ ಮಹಿಳೆಯ ಮಾನವೀಯ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.