ವಿಜಯಪುರ:ಅವಧಿಗೂ ಮುನ್ನ ಹೆರಿಗೆಯಾಗಿ ಚಿಕಿತ್ಸೆ ಪಡೆಯುತ್ತಿದ್ದ 7 ತಿಂಗಳ ಮಗುವಿನ ತಾಯಿ ಮೃತಪಟ್ಟ ಘಟನೆ ಸಂಬಂಧ ಪತಿ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲಾಗಿದೆ.
ಪತ್ನಿ ಸಂಗೀತ ಮೃತಪಟ್ಟಿರುವ ಬಳಿಕ ಪತಿ ತಲೆಮರೆಸಿಕೊಂಡಿದ್ದಾನೆ. ಪತಿ ಹುಬ್ಬು ಮನೆಯವರು ವರದಕ್ಷಿಣೆ ಕಿರುಕುಳ ನೀಡಿರುವುದೇ ಸಂಗೀತ ಸಾವಿಗೆ ನೇರ ಕಾರಣ ಎಂದು ಆರೋಪಿಸಿ ಕುಟುಂಬಸ್ಥರು ಕೂಡಗಿ ಠಾಣೆಯಲ್ಲಿ ದೂರು ನೀಡಿದ್ದಾರೆ.
ಜಿಲ್ಲೆಯ ಮದಭಾಂವಿ ತಾಂಡಾದ ನಿವಾಸಿ ಹುಬ್ಬು ಎಂಬಾತನನ್ನು ಸಂಗೀತ 2019ರಲ್ಲಿ ವಿವಾಹವಾಗಿದ್ದಳು, ಪತಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಇಬ್ಬರೂ ಅನ್ಯೂನ್ಯವಾಗಿಯೇ ಇದ್ದರು. ಬಳಿಕ ಗಂಡನ ಮನೆಯಲ್ಲಿ ಸಂಗೀತಳಿಗೆ ಕಿರುಕುಳ ನೀಡಲಾಗುತ್ತಿತ್ತು ಎಂದು ಮೃತಳ ಮನೆಯವರು ಆರೋಪಿಸಿದ್ದಾರೆ.
ಅಡುಗೆ ಬರುವುದಿಲ್ಲ ಹಾಗೂ ವರದಕ್ಷಿಣೆ ಸಂಬಂಧ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದಾದ ಬಳಿಕ ಗರ್ಭಿಣಿಯಾಗಿದ್ದ ಸಂಗೀತ ಆಸ್ಪತ್ರೆಗೆ ದಾಖಲಾಗಿದ್ದಾಳೆ. ವೈದ್ಯರು ಆಪರೇಷನ್ ಮೂಲಕ ಹೆರಿಗೆ ಮಾಡದಿದ್ದರೆ ಅಪಾಯವಿದೆ ಎಂದಾಗ, ಆಪರೇಷನ್ ಮೂಲಕ ಹೆರಿಗೆ ಮಾಡಿಸಿದ್ದಾರೆ. ಅವಧಿಗೂ ಮುನ್ನ 7ನೇ ತಿಂಗಳಲ್ಲಿ ಹೆರಿಗೆ ಮಾಡಿಸಿದ್ದು, ಮಗು ಆರೋಗ್ಯವಾಗಿಯೇ ಇತ್ತು. ಇಷ್ಟಾದರೂ ಪತಿಯ ಮನೆಯವರು ಒಂದು ದಿನವೂ ಆಸ್ಪತ್ರೆಗೆ ಬಂದಿರಲಿಲ್ಲ. ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಸಂಗೀತ ಸಾವಿನಪ್ಪಿದ್ದಳು. ಪತ್ನಿ ಮೃತಪಟ್ಟಾಗಲೂ ಪತಿ ಆಗಮಿಸಿರಲಿಲ್ಲ.
ಇದೀಗ ಸಂಗೀತಳ ಮನೆಯವರು, ಪೊಲೀಸ್ ಠಾಣೆ ಮೆಟ್ಟಿಲೇರಿ ವರದಕ್ಷಿಣೆ ಕಿರುಕುಳ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಇನ್ನು, ಇದಕ್ಕೂ ಮೊದಲೇ ಮಗಳ ಮೇಲೆ ಆಕೆಯ ಪತಿ ಹುಬ್ಬು ಹಾಗೂ ಪೋಷಕರು ಹಲ್ಲೆ ಮಾಡಿದ್ದಾರೆ ಎಂದು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರು ದಾಖಲಾಗಿ ಆರೋಪಪಟ್ಟಿ ಸಹ ದಾಖಲಾಗಿತ್ತು. ಆದರೆ ಪ್ರಕರಣದ ವಿಚಾರಣೆ ಮಾತ್ರ ಆರಂಭವಾಗಬೇಕಿತ್ತಷ್ಟೇ. ಆದರೆ ಇದೀಗ ಸಂಗೀತ ಕೊನೆಯುಸಿರೆಳೆದಿದ್ದು, ಪತಿ ಮನೆಯವರ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.
ಸದ್ಯ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಪತಿ ಹುಬ್ಬುವಿಗಾಗಿ ಬಲೆ ಬೀಸಿದ್ದಾರೆ.