ವಿಜಯಪುರ: ರಕ್ಷಾ ಬಂಧನ ಅಣ್ಣ-ತಂಗಿಯರ ಪವಿತ್ರ ಬಾಂಧವ್ಯವನ್ನ ಸಾಂಕೇತಿಸುವ ವಿಶೇಷ ಹಬ್ಬ. ಈ ಭಾನುವಾರ ಹಬ್ಬವಿದ್ದು, ಕೊರೊನಾ ರಾಖಿ ವ್ಯಾಪಾರಿಗಳನ್ನು ಕಾಡುತ್ತಿದೆ. ವೀಕೆಂಡ್ ಕರ್ಫ್ಯೂ ಇದ್ದು, ರಾಖಿ ವ್ಯಾಪಾರಸ್ಥರಕ್ಕೆ ಅಡ್ಡಿಯಾಗಲಿದೆ. ಜೊತೆಗೆ ರಾಖಿ ಖರೀದಿಸುವವರ ಸಂಖ್ಯೆಯೂ ಕಡಿಮೆಯಿದೆ.
ರಾಖಿ ವ್ಯಾಪಾರದ ಮೇಲೆ ಕೊರೊನಾ ಕರಿನೆರಳು ಪ್ರತಿ ವರ್ಷ ಸಹೋದರ-ಸಹೋದರಿಯರ ಬಾಂಧ್ಯವ್ಯದ ಈ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿತ್ತು. ಕಳೆದ ವರ್ಷ ಕೊರೊನಾದಿಂದ ಹಬ್ಬಕ್ಕೆ ಸ್ವಲ್ಪ ಮಟ್ಟಿನ ಮಂಕು ಕವಿದಿತ್ತು. ಆದರೆ, ಈ ವರ್ಷ ವೀಕೆಂಡ್ ಕರ್ಫ್ಯೂ ಹಬ್ಬಕ್ಕೆ ಅಡ್ಡಿಯಾದಂತಿದೆ.
ಶನಿವಾರ-ಭಾನುವಾರ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುವ ಕಾರಣ ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಖರೀದಿಸುವುದು ಹೇಗೆ ಎನ್ನುವ ಚಿಂತೆಯಲ್ಲಿದ್ದಾರೆ. ಇಂದು ಬೆರಳೆಣಿಕೆಯಷ್ಟು ಜನರು ಮಾತ್ರ ರಾಖಿ ಖರೀದಿಸಿದ್ದಾರೆ.
ವೀಕೆಂಡ್ ಕರ್ಫ್ಯೂ ಇರುವ ಕಾರಣ ವಿಜಯಪುರದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವೈದ್ಯ, ಇಂಜಿನಿಯರಿಂಗ್ ಸೇರಿ ವಿವಿಧ ಕೋರ್ಸ್ಗಳ ವಿದ್ಯಾರ್ಥಿಗಳು ತಮ್ಮ ಊರಿಗೆ ಹೋಗಲಾಗದೇ ತೊಂದರೆ ಅನುಭವಿಸುವಂತಾಗಿದೆ.
ಖರೀದಿಸುವವರಿಲ್ಲ-ಆತಂಕದಲ್ಲಿ ವಾಪಾರಿಗಳು :ಇನ್ನೊಂದೆಡೆ ಹೈದ್ರಾಬಾದ್, ಮುಂಬೈ ಸೇರಿ ದೊಡ್ಡ ದೊಡ್ಡ ನಗರಗಳಿಂದ ಲಕ್ಷಾಂತರ ರೂ. ಖರ್ಚು ಮಾಡಿ ರಾಖಿ ತಂದು ವ್ಯಾಪಾರ ಮಾಡುವ ವ್ಯಾಪಾರಸ್ಥರು ಸಹ ಕಂಗಾಲಾಗಿದ್ದಾರೆ.
ನಗರದ ಗಾಂಧಿ ವೃತ್ತದಲ್ಲಿ 10-15 ವ್ಯಾಪಾರಿಗಳು ಟೆಂಟ್ ಹಾಕಿಕೊಂಡು ವಿವಿಧ ಮಾದರಿಯ ರಾಖಿಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ. ಆದ್ರೆ, ಖರೀದಿಗೆ ಜನರೇ ಬರುತ್ತಿಲ್ಲ. ನಷ್ಟ ಅನುಭವಿಸುವ ಭೀತಿಯಲ್ಲಿ ವ್ಯಾಪಾರಸ್ಥರಿದ್ದಾರೆ.
ವ್ಯಾಪಾರಸ್ಥರ ಆಕ್ರೋಶ :ಭಾನುವಾರ ಹಬ್ಬ ಇದೆ. ಆದರೆ, ಅಂದು ವೀಕೆಂಡ್ ಕರ್ಫ್ಯೂ ಇದೆ. ಈ ರೀತಿ ಮಾಡುವುದರಿಂದ ನಮ್ಮ ವ್ಯಾಪಾರಕ್ಕೆ ಹೊಡೆತ ಬೀಳುತ್ತಿದೆ. ಕೇವಲ ಎರಡು ದಿನ ಬಂದ್ ಮಾಡಿದರೆ ಕೊರೊನಾ ಹೋಗುತ್ತಾ ಎಂದು ವ್ಯಾಪಾರಿಗಳು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.