ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ವಿಜಯಪುರ : ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ನಮ್ಮ ಸೀನಿಯರ್ ಲೀಡರ್, ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು ಹೇಳಿದ್ದಾರೆ. ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಮಾರ್ಗದರ್ಶನ, ಬೊಮ್ಮಾಯಿ ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದರು.
ಮಾಜಿ ಸಚಿವ ಎಂ ಬಿ ಪಾಟೀಲ ವಿರುದ್ಧ ವಾಗ್ದಾಳಿ ನಡೆಸಿದ ಸಿಟಿ ರವಿ, ಈ ಹಿಂದೆ ಕೆರೆ ತುಂಬುವ ಯೋಜನೆಯನ್ನು ನಿಮ್ಮದೇ ಸರ್ಕಾರ ತಿರಸ್ಕಾರ ಮಾಡಿತ್ತು. ಮಲ್ಲಿಕಾರ್ಜುನ ಖರ್ಗೆ ನೀರಾವರಿ ಸಚಿವರಾಗಿದ್ದಾಗ ಕೆರೆ ತುಂಬುವ ಯೋಜನೆಗೆ ಅನುಮತಿ ನೀಡಿರಲಿಲ್ಲ. ಇದೀಗ ನೀವು ಅದೇ ಯೋಜನೆಯ ಹೆಸರಿನಲ್ಲಿ ಫೋಟೋ ಹಾಕಿಕೊಳ್ಳುತ್ತೀರಿ ಎಂದು ವಾಗ್ದಾಳಿ ನಡೆಸಿದ ಸಿಟಿ ರವಿ, ಬಿಜೆಪಿ ಸರ್ಕಾರ ಕೆರೆ ತುಂಬುವ ಯೋಜನೆ ಜಾರಿಗೆ ತಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಗ್ಯಾರಂಟಿ ಕಾರ್ಡ್ ವಿತರಣೆ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷಕ್ಕೆ ದೇಶದಲ್ಲಿ ವಾರಂಟಿ ಅವಧಿ ಮುಗಿದಿದೆ. ವಾರಂಟಿ ಕಾರ್ಡ್ ನೀಡಿ ಏನು ಪ್ರಯೋಜನ? ಕಾಂಗ್ರೆಸ್ ಗ್ಯಾರಂಟಿ ಅನ್ನೋದು ಒಂದು ಫಾಲ್ಸ್ ಕಾರ್ಡ್,
ಫಾಲ್ಸ್ ಕಾರ್ಡ್ ಬದಲಾಗಿ ನಾವು ಜನರಿಗೆ ಅಭಿವೃದ್ಧಿ ಕಾರ್ಡ್ ನೀಡುತ್ತೇವೆ ಎಂದರು.
ಯಾರಿಗೆ ಟಿಕೆಟ್ ಕೊಡಬೇಕು ಅನ್ನುವ ನಿರ್ಣಯ ಸಂಸದೀಯ ಮಂಡಳಿಯಲ್ಲಿ ತೀರ್ಮಾನ ಆಗುತ್ತೆ ಹೊರತು ಅಡುಗೆ ಮನೆಯಲ್ಲಿ ಅಲ್ಲ. ಸರ್ವೇ ಆಧರಿಸಿ ಕೆಲ ಮಾನದಂಡಗಳನ್ನು ಪರಿಶೀಲಿಸಿ ಯಾರಿಗೆ ಟಿಕೆಟ್ ಕೊಡುಬೇಕೆಂಬುದನ್ನು ಪಕ್ಷವೇ ನಿರ್ಧರಿಸುತ್ತದೆ ಹೊರತು ಕುಟುಂಬ ಅಲ್ಲ ಎಂದು ಸಿ ಟಿ ರವಿ ಹೇಳಿದರು.
ಮಹಾದ್ವಾರ ತೆರವು ಮಾಡಿದ್ದು, ಅಕ್ಷಮ್ಯ ಅಪರಾಧ : ಮಂಡ್ಯದಲ್ಲಿ ಉರಿಗೌಡ, ನಂಜೇಗೌಡ ಮಹಾದ್ವಾರ ತೆರವು ಮಾಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ರವಿ, ಮಹಾದ್ವಾರ ತೆರವು ಮಾಡಿದ್ದು, ಅಕ್ಷಮ್ಯ ಅಪರಾಧ ಎಂದ ಅವರು, ದ್ವಾರ ಹಾಕಿದ್ದು ಸರಿಯಾಗಿದೆ. ಆದರೆ ತೆರವು ಮಾಡಿದ್ದು ಯಾಕೆ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಶಾಶ್ವತ ದ್ವಾರ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು. ದೇಶದಲ್ಲಿ ಕೆಲಸ ಮಾಡೋದು ಮೋದಿ ಅವರ ನೇತೃತ್ವದಲ್ಲಿ. ಹಾಗಾಗಿ ನಾವು ಅವರ ಹೆಸರಿನಲ್ಲೇ ಹಾಗೂ ಅವರ ನೇತೃತ್ವದಲ್ಲೇ ಮತ ಯಾಚಿಸುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ನಲ್ಲಿ ನಾಯಕತ್ವ ಡಿಎನ್ಎ ಮೂಲಕ ಬರುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದರು. ಜೆಡಿಎಸ್ನಲ್ಲೂ ಕುಟುಂಬದ ಆಧಾರದ ಮೇಲೆ ನಾಯಕತ್ವ ಬರುತ್ತದೆ. ಆದರೆ, ಬಿಜೆಪಿಯಲ್ಲಿ ಅದು ಸಾಧ್ಯವಿಲ್ಲ. ನಮ್ಮ ಪಕ್ಷದಲ್ಲಿ ಕಾರ್ಯಕರ್ತರ ಮೂಲಕ ನಮ್ಮಲ್ಲಿ ನಾಯಕರು ಬರುತ್ತಾರೆ. ಸಂವಿಧಾನಕ್ಕೆ ಅನುಗುಣವಾಗಿ ನಾವು ಮೀಸಲಾತಿ ನೀಡಿದೆವು ಎಂದರು.
ಉತ್ರಮ ಪ್ರತಿಕ್ರಿಯೆ :ವಿಜಯ ಸಂಕಲ್ಪ ಯಾತ್ರೆಗೆ ರಾಜ್ಯದಲ್ಲಿ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ. ನಾವು ಹೋದ ಕಡೆಗಳೆಲ್ಲ ಜನರು ಉತ್ತಮವಾಗಿ ಸ್ಪಂದನೆ ನೀಡುತ್ತಿದ್ದಾರೆ. ಮಂಡ್ಯದಲ್ಲಿ ಮೋದಿ ಕಾರ್ಯಕ್ರಮ ನಿರೀಕ್ಷೆಗೆ ಮೀರಿ ಬೆಂಬಲ ದೊರಕಿದೆ. ಮಂಡ್ಯ ಭಾಗದಿಂದ ಕಾಂಗ್ರೆಸ್, ಜೆಡಿಎಸ್ ನಾಯಕರು ಬಿಜೆಪಿಗೆ ಬರಲಿದ್ದಾರೆ. ಪ್ರಧಾನಿ ಮೋದಿಗೆ ಮಂಡ್ಯದಲ್ಲಿ ಉತ್ತಮವಾದ ಬೆಂಬಲ ನೀಡಿದ್ದಾರೆ. ಕಾಂಗ್ರೆಸ್ ನಾಯಕರ ಸುಳ್ಳು ಭರವಸೆ ಜನರಿಗೆ ತಿಳಿದಿದೆ. ಬಿಜೆಪಿ ಪರವಾಗಿ ರಾಜ್ಯದಲ್ಲಿ ಜನ ಬೆಂಬಲ ಇದೆ ಎಂದು ಹೇಳಿದರು.
ಸಿದ್ದು ಉಲ್ಟಾ ಏನಾದರೂ ಹೇಳಿದರೆ ಚಾನ್ಸ್ ಇದೆ:ಸಿದ್ದರಾಮಯ್ಯ ನಮ್ಮಪ್ಪನಾಣೆಗೆ ಬಿಎಸ್ವೈ ಸಿಎಂ, ಮೋದಿ ಪ್ರಧಾನಿಯಾಗುವುದಿಲ್ಲ ಎಂದಿದ್ದರು. ಆದರೆ, ಅವರು ಹೇಳಿದ ಭವಿಷ್ಯ ಉಲ್ಟಾ ಆಗುತ್ತಲೇ ಇದೆ. ಅವರಿಗೆ ಎಡಕ್ಕೆ ಮಚ್ಚೆ ಇರಬೇಕು. ತಾನು ಮತ್ತೊಮ್ಮೆ ಸಿಎಂ ಆಗುತ್ತೇನೆ ಎಂದು ಹೇಳಿದ್ದರು. ಆದರೂ ಆಗಲಿಲ್ಲ. ಅವರ ಹೇಳಿದ ಮಾತು ಉಲ್ಟಾ ಆಗುತ್ತದೆ ಎಂದು ಸಿ ಟಿ ರವಿ ಅವರು ಹೇಳಿದರು.
ಪಕ್ಷದ ಆದೇಶವೇ ನಮಗೆ ಆದೇಶ :ಇನ್ನೊಂದೆಡೆ ಬೆಳಗಾವಿಯ ಅಥಣಿ ಕ್ಷೇತ್ರಕ್ಕೆ ಹಾಲಿ ಶಾಸಕ ಮಹೇಶ್ ಕುಮಟಳ್ಳಿಗೆ ಟಿಕೆಟ್ ಕೊಡದಿದ್ದರೆ ನಾನು ಗೋಕಾಕ್ ಕ್ಷೇತ್ರದಿಂದ ಸ್ಪರ್ಧಿಸಲ್ಲ ಎಂದು ಇತ್ತೀಚಿಗೆ ಮಾಜಿ ಸಚಿವ ಬಿಜೆಪಿಯ ರಮೇಶ್ ಜಾರಕಿಹೊಳಿ ನೀಡಿದ ಹೇಳಿಕೆ ವಿಚಾರವಾಗಿ ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಪಕ್ಷದ ಆದೇಶವೇ ನಮಗೆ ಆದೇಶ. ಪಕ್ಷ ಏನು ನಿರ್ಧಾರ ಮಾಡುತ್ತದೆಯೋ ಅದನ್ನು ನಾವು ಪಾಲನೆ ಮಾಡುತ್ತೇವೆ. ರಮೇಶ್ ಜಾರಕಿಹೊಳಿ ಅವರ ಹೇಳಿಕೆ ಬಗ್ಗೆ ನಾವು ಯಾವುದೇ ಪ್ರತಿಕ್ರಿಯೆ ನೀಡಲ್ಲ, ಪಕ್ಷದ ಆದೇಶ ಪಾಲನೆ ಮಾಡುತ್ತೇವೆ ಎಂದು ಪುನರುಚ್ಚಾರ ಮಾಡಿದರು.
ಇದನ್ನೂ ಓದಿ :ಕ್ರಿಕೆಟ್ ಬೆಟ್ಟಿಂಗ್ ಮಾಡುವ ವ್ಯಕ್ತಿಗೆ ಮೋದಿ ತಲೆಬಾಗಿ ನಮಸ್ಕಾರ: ಹೆಚ್ಡಿಕೆ