ವಿಜಯಪುರ:ಜುಲೈ 26ರಿಂದ 120 ದಿನಗಳವರೆಗೆ ಮುಂಗಾರು ಹಂಗಾಮಿಗೆ ನೀರು ಪೂರೈಸಲು ನಿನ್ನೆ ನಡೆದ ಕೃಷ್ಣ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದ ಆಲಮಟ್ಟಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರೂ ಆಗಿರುವ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಮಾತನಾಡಿ, "ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯ ವ್ಯಾಪ್ತಿಯ ಎಲ್ಲಾ ಕಾಲುವೆಗಳಿಗೆ ಮುಂಗಾರು ಹಂಗಾಮಿಗೆ ನೀರು ಹರಿಬಿಡಲಾಗುವುದು" ಎಂದು ಹೇಳಿದರು.
"14 ದಿನ ಚಾಲೂ 8ದಿನ ಬಂದ್ ಪದ್ಧತಿಯಲ್ಲಿ 120 ದಿನಗಳವರೆಗೆ ನೀರು ಹರಿಸಲಾಗುವುದು. ಸದ್ಯ ಎರಡೂ ಜಲಾಶಯಗಳಲ್ಲಿ 97.491 ಟಿಎಂಸಿ ನೀರು ಲಭ್ಯವಿದೆ. ಮುಂಗಾರು ಹಂಗಾಮಿನ 120 ದಿನಗಳಿಗೆ ಯೋಜನಾ ವರದಿಯಂತೆ 67 ಟಿಎಂಸಿ ನೀರಿನ ಪ್ರಮಾಣದ ಅಗತ್ಯವಿದೆ. ಅಗತ್ಯ ಬಳಕೆಗೆ 13 ಟಿಎಂಸಿ ನೀರು ಬೇಕು. ಇವೆರಡೂ ಸೇರಿ ಒಟ್ಟು ಬಳಕೆಗೆ 80 ಟಿಎಂಸಿ ನೀರಿನ ಅಗತ್ಯವಿದೆ" ಎಂದು ಸಚಿವ ಪಾಟೀಲ್ ಮಾಹಿತಿ ನೀಡಿದರು.