ವಿಜಯಪುರ : ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಆಲಮಟ್ಟಿ ಜಲಾಶಯದಿಂದ ಹೆಚ್ಚುವರಿ 2.50 ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದ್ದು, ನಾರಾಯಣಪುರ ಹಿನ್ನೀರಿನ ಗ್ರಾಮಗಳ ಹೊಲಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿದೆ.
ಆಲಮಟ್ಟಿ ಜಲಾಶಯದಿಂದ ನೀರು ಬಿಡುಗಡೆ: ರೈತರ ಬೆಳೆ ನಾಶ - ವಿಜಯಪುರದಲ್ಲಿ ರೈತರ ಜಮೀನಿಗೆ ನುಗ್ಗಿದ ನೀರು
ಆಲಮಟ್ಟಿ ಜಲಾಶಯದಿಂದ ಹೆಚ್ಚುವರಿ ನೀರು ಹೊರಬಿಟ್ಟಿರುವುದರಿಂದ ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಹಲವು ಗ್ರಾಮಗಳ ರೈತರ ಜಮೀನಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ.
![ಆಲಮಟ್ಟಿ ಜಲಾಶಯದಿಂದ ನೀರು ಬಿಡುಗಡೆ: ರೈತರ ಬೆಳೆ ನಾಶ water Release from Alamatti Reservoir](https://etvbharatimages.akamaized.net/etvbharat/prod-images/768-512-8464554-thumbnail-3x2-hrss.jpg)
ಜಿಲ್ಲೆಯ ನಿಡಗುಂದಿ ತಾಲೂಕಿನ ಲಾಲ್ ಬಹದ್ದೂರ ಶಾಸ್ತ್ರಿ (ಆಲಮಟ್ಟಿ) ಜಲಾಶಯ ಭೋರ್ಗರೆಯುತ್ತಿದೆ. ಜಲಾಶಯಕ್ಕೆ 1,66,935 ಕ್ಯೂಸೆಕ್ ನೀರು ಹರಿದು ಬಂದಿದ್ದು, ಪರಿಣಾಮ ಜಲಾಶಯದ ನೀರಿನ ಮಟ್ಟ 518.35 ಮೀಟರ್ಗೆ ಏರಿಕೆಯಾಗಿದೆ. ಜಲಾಶಯದಲ್ಲಿ 102.412 ಟಿಎಂಸಿ ನೀರು ಸಂಗ್ರಹವಿರುವ ಹಿನ್ನೆಲೆ, ಹೆಚ್ಚುವರಿ 2.51ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗಿದೆ. ಇದರಿಂದ ನದಿ ಪಾತ್ರದ ಅರಳದಿನ್ನಿ, ಯಲಗೂರ, ಮಸೂತಿ, ಕಾಳಗಿ ಗ್ರಾಮಗಳಲ್ಲಿ ಹೊಲಗಳಿಗೆ ನೀರು ನುಗ್ಗಿದೆ. ರೈತರು ಬೆಳೆದಿದ್ದ ಸೂರ್ಯಕಾಂತಿ, ಕಬ್ಬು, ತೊಗರಿ ಸೇರಿದಂತೆ ಒಣ ಬೇಸಾಯ ಬೆಳೆಗಳು ನಾಶವಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಷ್ಟು ಪ್ರಮಾಣದಲ್ಲಿ ನೀರು ನುಗ್ಗಿಲ್ಲ. ಆದರೂ, ಬೆಳೆದು ನಿಂತ ರೈತರ ಬೆಳೆ ನಾಶವಾಗಿದೆ.
ಕಳೆದ ವರ್ಷ ಪ್ರವಾಹ ಬಂದಾಗ ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶವಾಗಿತ್ತು. ಇದಾಗಿ ಒಂದು ವರ್ಷ ಕಳೆದರೂ ರೈತರಿಗೆ ಇದುವರೆಗೆ ಸರಿಯಾದ ಪರಿಹಾರ ದೊರೆತಿಲ್ಲ. ಅಲ್ಪ ಸ್ವಲ್ಪ ಪರಿಹಾರ ನೀಡಿ ಸರ್ಕಾರ ಕೈ ತೊಳೆದುಕೊಂಡಿದೆ. ಈ ಬಾರಿ ಮತ್ತೆ ರೈತರಿಗೆ ಪ್ರವಾಹದ ಭೀತಿ ಎದುರಾಗಿದೆ. ಸೋಮವಾರ ತಹಶೀಲ್ದಾರ್ ನೇತೃತ್ವದ ತಂಡ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ನಷ್ಟದ ಅಂದಾಜು ಹಾಕಿದೆ. ಶೀಘ್ರ ಪರಿಹಾರ ನೀಡುವ ಭರವಸೆಯನ್ನೂ ನೀಡಿದೆ.