ವಿಜಯಪುರ: ಜಿಲ್ಲೆಯ ತಿಕೋಟಾ ತಾಲೂಕಿನ ಕಳ್ಳಕವಟಗಿಯ ಐತಿಹಾಸಿಕ ಸಂಗಮನಾಥ ದೇವಸ್ಥಾನ ಭಾರಿ ಮಳೆಯಿಂದ ಜಲಾವೃತವಾಗಿದೆ. ಬಿದ್ದ ಮಳೆಯಿಂದ ದೇವಸ್ಥಾನದ ಗರ್ಭಗುಡಿಯೊಳಗೆ ನೀರು ನುಗ್ಗಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.
ತಿಕೋಟಾ ತಾಲೂಕಿನ ಬಾಬಾನಗರ, ಬಿಜ್ಜರಗಿ ಸೇರಿದಂತೆ ಮೇಲ್ಭಾಗದ ಗ್ರಾಮಗಳಲ್ಲಿ ಹೆಚ್ಚು ಮಳೆಯಾದರೆ ತೊರವಿ ಎಂಬ ಹಳ್ಳದ ರಭಸಕ್ಕೆ ಸಂಗಮನಾಥ ದೇವಾಲಯ ಇದೇ ರೀತಿ ಮುಳುಗಡೆಯಾಗುತ್ತದೆ. ಈ ವರ್ಷವೂ ಹಾಗೇ ಆಗಿದೆ. ನೀರು ನುಗ್ಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸ್ಥಳೀಯರು ಜಿಲ್ಲಾಡಳಿತಕ್ಕೆ ಹಲವು ಮನವಿಯೇನೋ ಮಾಡಿಕೊಂಡಿದ್ದಾರೆ. ಆದರೆ, ನಿರೀಕ್ಷೆ ಮೀರಿ ಸುರಿಯುತ್ತಿರುವ ಮಳೆಯಿಂದ ತಗ್ಗು ಪ್ರದೇಶಗಳೆಲ್ಲ ಇದೇ ರೀತಿ ಮುಳುಗಡೆಯಾಗುತ್ತಲೇ ಇವೆ. ಇನ್ನು ಸಾಲದೆಂಬಂತೆ ಜಿಲ್ಲೆಯ ನದಿಗಳು ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದ ಜನರಲ್ಲಿ ಆತಂಕ ಸಹ ಹೆಚ್ಚಾಗಿದೆ.
ನೀರು ನಿಂತ ಗರ್ಭ ಗುಡಿಯೊಳಗೆ ಹೋಗಿ ಪೂಜೆ ಸಲ್ಲಿಕೆ:
ದೇವಸ್ಥಾನದ ಮುಂಭಾಗ ಹಾಗೂ ಗರ್ಭ ಗುಡಿಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತಿರುವ ಕಾರಣ ನಿತ್ಯ ಸಂಗಮನಾಥನಿಗೆ ಪೂಜಾ ಕೈಂಕರ್ಯ ಮಾಡುವುದು ದುಸ್ತರವಾಗಿದೆ. ಹಿಂಬದಿಯೇ ತೊರವಿ ಹಳ್ಳ ಇರುವುದರಿಂದ ಅಲ್ಲಿ ಉಕ್ಕಿದ ನೀರು ದೇವಸ್ಥಾನದ ಮುಂಭಾಗ ಜಮಾವಣೆಗೊಂಡಿದ್ದು, ಗರ್ಭ ಗುಡಿಯಲ್ಲಿನ ಲಿಂಗದೇವರು ಮುಳುಗುವ ಹಂತಕ್ಕೆ ತಲುಪಿದೆ. ಸಂಗಮನಾಥನ ಎದುರಿನ ನಂದಿ ವಿಗ್ರಹ ಸಹ ಅರ್ಧ ಮುಳುಗಡೆಯಾಗಿದೆ. ಬೆಳಗ್ಗೆ 5 ಗಂಟೆಗೆ ಮಹಾಪೂಜೆ ನೆರವೇರಿಸುವುದು ದಿನದ ಸಂಪ್ರದಾಯ. ಇಂದು ಸಹ ನೀರು ನಿಂತ ಗರ್ಭ ಗುಡಿಯೊಳಗೆ ಹೋಗಿ ಪೂಜೆ ಸಲ್ಲಿಸಿಕೊಂಡು ಬರಲಾಗಿದೆ.