ವಿಜಯಪುರ: ಖಾಲಿ ಖಾಲಿಯಾಗಿ ಕಾಣುತ್ತಿದ್ದ ಜಿಲ್ಲೆಯ ಜೀವಜಲ ಆಲಮಟ್ಟಿ ಜಲಾಶಯಕ್ಕೆ ಕೊನೆಗೂ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಪ್ರಸಕ್ತ ಸಾಲಿನಲ್ಲಿ ಇದೇ ಮೊದಲ ಬಾರಿ ಪ್ರಮಾಣದ ಒಳಹರಿವು ಆರಂಭವಾಗಿದೆ. ಡ್ಯಾಂನಲ್ಲಿ ನೀರಿಲ್ಲದಿರುವುದಕ್ಕೆ ಜನರು ಆತಂಕಗೊಂಡಿದ್ದರು. ಅದರಲ್ಲೂ ಮುಂಗಾರು ಆರಂಭವಾಗಿ ತಿಂಗಳು ಕಳೆದರೂ ಮಳೆಯಾಗದ ಹಿನ್ನೆಲೆಯಲ್ಲಿ ನದಿತೀರದ ಜನರು ಬರದ ಭೀತಿಯಲ್ಲಿದ್ದರು. ಆದ್ರೆ ಇದೀಗ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯಾದ್ದರಿಂದ ಕೃಷ್ಣಾ ನದಿಗೆ ನೀರು ಹರಿದುಬರುತ್ತಿದೆ. ನದಿತೀರದ ಜನರ ಮುಖದಲ್ಲಿಯೂ ಮಂದಹಾಸ ಅರಳಿದೆ.
19 ಸಾವಿರ ಕ್ಯೂಸೆಕ್ ಒಳಹರಿವು:ಆಲಮಟ್ಟಿ ಜಲಾಶಯಕ್ಕೆ ಪ್ರಸಕ್ತ ಸಾಲಿನಲ್ಲಿ 19,172 ಕ್ಯೂಸೆಕ್ನಷ್ಟು ನೀರು ಬಂದಿದೆ. ಕೃಷ್ಣಾ ನದಿಯ ಮೇಲ್ಭಾಗದಲ್ಲಿ ಅಂದ್ರೆ ಮಹಾರಾಷ್ಟ್ರದಲ್ಲಿ ಮಳೆಯಾಗುತ್ತಿರುವುದರಿಂದ ಆಲಮಟ್ಟಿಗೆ ಒಳಹರಿವು ಶುರುವಾಗಿದೆ. ಜಲಾಶಯದ ಇಂದಿನ ನೀರಿನ ಮಟ್ಟ 20.547 ಟಿಎಂಸಿಗೆ ತಲುಪಿದೆ. ಇದರಿಂದಾಗಿ ಜಲಾಶಯಕ್ಕೆ ಕೊಂಚ ಕಳೆ ಬಂದಿದೆ.
519.60 ಮೀಟರ್ ಎತ್ತರದ ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ ಜಲಾಶಯ (ಆಲಮಟ್ಟಿ ಡ್ಯಾಂ) 123.081 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿದೆ. ಆದ್ರೆ ಮಳೆಯಾಗದ ಕಾರಣ ಜಲಾಶಯದಲ್ಲಿ ಕೇವಲ 18.939 ಟಿಎಂಸಿ ನೀರಿತ್ತು. ಜಲಚರಗಳಿಗಾಗಿ ಮೀಸಲಿರಿಸಿದ ಡೆಡ್ ಸ್ಟೋರೇಜ್ ಹೊರತುಪಡಿಸಿ ಕೇವಲ 1.319 ಟಿಎಂಸಿ ನೀರು ಸಂಗ್ರಹವಿತ್ತು.
ಕೃಷಿ ಚಟುವಟಿಕೆಗಂತೂ ಮೊದಲೇ ನೀರಿರಲಿಲ್ಲ, ಕುಡಿಯಲು ನೀರಿನ ಕೊರತೆಯೂ ಎದುರಾಗಿತ್ತು. ಇನ್ನೂ 15-20 ದಿನಕ್ಕಾಗುವಷ್ಟು ಕುಡಿಯುವ ನೀರು ಮಾತ್ರ ಜಲಾಶಯದಲ್ಲಿತ್ತು. ನಿರೀಕ್ಷಿತ ಮಳೆಯಿಲ್ಲದೆ ಜಿಲ್ಲೆಯಲ್ಲಿನ ಹಳ್ಳ- ಕೊಳ್ಳ, ಕೆರೆಗಳೆಲ್ಲವೂ ಸೇರಿ ನೀರಿನ ಎಲ್ಲ ಸಂಪನ್ಮೂಲಗಳು ಬತ್ತಿಹೋಗಿದ್ದವು. ಇದರಿಂದ ಜಿಲ್ಲೆಯ ಜನರು ಕಂಗಾಲಾಗಿದ್ದರು. ಆದ್ರೀಗ ಡೆಡ್ ಸ್ಟೋರೇಜ್ ಹೊರತುಪಡಿಸಿ ನೀರಿನ ಲಭ್ಯತೆ 2.927 ಟಿಎಂಸಿಯಷ್ಟಿದೆ.