ವಿಜಯಪುರ: ವಿಶ್ವಕ್ಕೆ ಸಮಾನತೆ ಸಾರಿದ ವಿಶ್ವಗುರು ಬಸವಣ್ಣನವರು ಜನಿಸಿದ ವಿಜಯಪುರ ಜಿಲ್ಲೆಗೆ ಬಸವ ಜಿಲ್ಲೆ ಅಥವಾ ಬಸವೇಶ್ವರ ಜಿಲ್ಲೆ ಎಂದು ಮರು ನಾಮಕರಣ ಮಾಡಲು ಸಂಘ - ಸಂಸ್ಥೆಗಳು, ಗಣ್ಯ ವ್ಯಕ್ತಿಗಳಿಂದ ಅರ್ಜಿಗಳು ಸ್ವೀಕೃತವಾಗಿವೆ. ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಗೆ ಬಸವಣ್ಣನವರ ಹೆಸರು ಮರು ನಾಮಕರಣ ಮಾಡಲು ಜಿಲ್ಲೆಯ ಜನಪ್ರತಿನಿಧಿ, ಗಣ್ಯವ್ಯಕ್ತಿಗಳ ಹಾಗೂ ಸಾರ್ವಜನಿಕರಿಂದ ಅಭಿಪ್ರಾಯ ಆಹ್ವಾನಿಸಲಾಗಿದೆ. ಜಿಲ್ಲೆಗೆ ಮರು ನಾಮಕರಣ ಮಾಡುವ ಕುರಿತು 15 ದಿನಗಳೊಳಗಾಗಿ ಸ್ಪಷ್ಟ ಅಭಿಪ್ರಾಯವನ್ನು ಲಿಖಿತ ರೂಪದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಬಿಜಾಪುರ ಜಿಲ್ಲೆಯನ್ನ ವಿಜಯಪುರ ಎಂದು ಬದಲಾಯಿಸಲಾಗಿತ್ತು. ಇದೀಗ ವಿಜಯಪುರ ಜಿಲ್ಲೆಗೆ ಬಸವೇಶ್ವರರ ಹೆಸರಿಡುವ ವಿಚಾರ ಮುನ್ನೆಲೆಗೆ ಬಂದಿದೆ. ಬಸವಣ್ಣನವರು ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಜನಿಸಿ, ವಿಶ್ವಕ್ಕೆ ಸಮಾನತೆಯ ಸಂದೇಶ ಸಾರಿದ್ದಾರೆ. ಅವರ ಕೊಡುಗೆಗಳನ್ನು ಪರಿಗಣಿಸಿ ಜಿಲ್ಲೆಗೆ ಬಸವ ಜಿಲ್ಲೆ ಅಥವಾ ಬಸವೇಶ್ವರ ಜಿಲ್ಲೆ, ಬಸವನಾಡು ಎಂದು ಮರು ನಾಮಕರಣ ಮಾಡಬೇಕು ಎಂಬ ಚರ್ಚೆ ನಡೆದಿದೆ.
ಜಿಲ್ಲೆಗೆ ಬಸವೇಶ್ವರರ ಹೆಸರಿಡುವುದು ಸೂಕ್ತ ಎಂದು ಕೆಲ ಸಂಘ ಸಂಸ್ಥೆಗಳು ಮತ್ತು ಬಸವೇಶ್ವರರ ಅನುಯಾಯಿಗಳು ಹೇಳಿದರೆ, ಇನ್ನೂ ಕೆಲವರು ಹೆಸರು ಬದಲಾವಣೆಗಿಂತ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮರುನಾಮಕರಣ ಪ್ರಕ್ರಿಯೆಯಿಂದಾಗಿ ಆಡಳಿತಾತ್ಮಕವಾಗಿ ಜಿಲ್ಲೆಗೆ ಹಿನ್ನಡೆಯಾಗಲಿದೆ ಎಂಬ ಅಭಿಪ್ರಾಯವನ್ನ ಕೆಲ ಸಂಘಟನೆಯ ಮುಖಂಡರು ವ್ಯಕ್ತಪಡಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಅಲ್ಲದೇ ವ್ಯವಹಾರಿಕ ದೃಷ್ಠಿಯಿಂದಲೂ ವಿಜಯಪುರ ಈಗಾಗಲೇ ಪ್ರಸಿದ್ಧಿ ಗಳಿಸಿದೆ. ಬಸವಣ್ಣನವರ ಹೆಸರನ್ನ ಚಿರಸ್ಥಾಯಿಯಾಗಿಸಲು ಹಲವಾರು ಮಾರ್ಗಗಳಿವೆ. ಬಸವೇಶ್ವರರ ಬಗ್ಗೆ ನಮಗೆಲ್ಲರಿಗೂ ಗೌರವವಿದೆ. ಅಂತಹ ಮಹಾನ್ ಮಾನವತಾವಾದಿ ಈ ಜಿಲ್ಲೆಯಲ್ಲಿ ಜನ್ಮ ತಾಳಿರುವುದು ನಮಗೆಲ್ಲಾ ಹೆಮ್ಮೆ ತರುವ ಸಂಗತಿಯಾಗಿದೆ. ಆದರೆ, ಪ್ರಸಕ್ತ ಸಂದರ್ಭದಲ್ಲಿ ಜಿಲ್ಲೆಗೆ ಬಸವೇಶ್ವರರ ಹೆಸರು ಇಡುವುದು ಅಷ್ಟು ಸೂಕ್ತವಲ್ಲ. ರಾಜಕೀಯ ಪ್ರೇರಿತವಾಗಿ ಜಿಲ್ಲೆಗೆ ಬಸವೇಶ್ವರರ ಹೆಸರಿಡುವ ಬದಲು ಕರ್ನಾಟಕ ರಾಜ್ಯದ ಹೆಸರನ್ನೇ ಬಸವನಾಡು ಎಂದು ಬಸಲಿಸುವುದು ಸೂಕ್ತ. ಇದರ ಜೊತೆಗೆ ಬಸವನ ಬಾಗೇವಾಡಿಯ ಸರ್ವತೋಮುಖ ಅಭಿವೃದ್ಧಿಯ ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಲಿ. ಇದರಿಂದ ಬಸವ ಜನ್ಮಭೂಮಿ ವಿಶ್ವ ಪ್ರಸಿದ್ಧಿ ಮಾಡಲಿ ಎಂದು ಇತಿಹಾಸ ತಜ್ಞ ಕೃಷ್ಣ ಕೊಲ್ಹಾರ ಕುಲಕರ್ಣಿ ಅಭಿಪ್ರಾಯಪಟ್ಟಿದ್ದಾರೆ.