ವಿಜಯಪುರ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಸಮಸ್ಯೆಗಳು ಬಗೆಹರಿಯದ ಕಾರಣ ಹಲವಾರು ಗ್ರಾಮಗಳ ಜನರು ಈ ಬಾರಿ ಮತದಾನ ಬಹಿಷ್ಕಾರ ಮಾಡುವುದಾಗಿ ಘೋಷಿಸಿದ್ದಾರೆ. ಅಂತೆಯೇ ನಗರದ ಹೊರವಲಯದ ಶಿವಗಿರಿ ಬಳಿಯ ವಾರ್ಡ್ ನಂ.17ರ ಸೌಭಾಗ್ಯ ನಗರದ ನಾಗರಿಕರು ಮೂಲಭೂತ ಸೌಕರ್ಯಗಳ ಕೊರತೆಯನ್ನು ವಿರೋಧಿಸಿ ಮುಂದಿನ ಚುನಾವಣೆ ಬಹಿಷ್ಕಾರ ಮಾಡುವ ಪೋಸ್ಟರ್ಗಳನ್ನು ಅಂಟಿಸಿ ಮಹಾನಗರ ಪಾಲಿಕೆಗೆ ಎಚ್ಚರಿಕೆ ನೀಡಿದ್ದಾರೆ.
ಪೋಸ್ಟರ್ ಅಂಟಿಸಿ ಪ್ರತಿಭಟನೆ:ಮೂಲಭೂತ ಸೌಕರ್ಯಗಳಾದ 24/7 ಕುಡಿಯುವ ನೀರು, ಕಳೆದ ಐದು ವರ್ಷಗಳಿಂದ ಸುಸಜ್ಜಿತ ರಸ್ತೆ ಇಲ್ಲದಿರುವುದು, ಕುಡುಕರು, ಕಳ್ಳರ ಹಾವಳಿ, ಮಕ್ಕಳಿಗೆ ಆಟದ ಮೈದಾನ, ಹಿರಿಯರಿಗೆ ಉದ್ಯಾನ, ರಸ್ತೆ ದೀಪ, ಒಳಚರಂಡಿ ವ್ಯವಸ್ಥೆ ನಿರ್ವಹಣೆ ಮಾಡದಿರುವ ಕಾರಣ ರಾತ್ರಿ ಹೊರಗಡೆ ಬರಲು ಇಲ್ಲಿನ ಜನ ಭಯಪಡುವಂತಾಗಿದೆ. ಸೂಕ್ತ ಭದ್ರತೆ ಇಲ್ಲದಿರುವ ಕುರಿತು ಸಾಕಷ್ಟು ಬಾರಿ ಮಹಾನಗರ ಪಾಲಿಕೆಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿ ಚುನಾವಣಾ ಬಹಿಷ್ಕಾರದ ಪೋಸ್ಟರ್ ಅಂಟಿಸಿ ವಿನೂತನವಾಗಿ ಪ್ರತಿಭಟಿಸುತ್ತಿದ್ದಾರೆ.
ಇನ್ನು ಕಿಡಿಗೇಡಿಗಳು ಈ ಪೋಸ್ಟರ್ಗಳನ್ನು ಕಿತ್ತುಕೊಂಡು ಹೋಗಿದ್ದರ ಬಗ್ಗೆ ಬಡಾವಣೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಪೋಸ್ಟರ್ಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಬಡಾವಣೆಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದರು. ಶೀಘ್ರವೇ ಎಲ್ಲ ಸೌಕರ್ಯ ಕಲ್ಪಿಸುವ ಭರವಸೆ ನೀಡಿದರು.
ಇದೇ ವೇಳೆ ಬಡಾವಣೆಯ ನಾಗರಿಕರು ತಮ್ಮ ಅಳಲನ್ನು ತೊಡಿಕೊಂಡರು. ‘ಬಡಾವಣೆಯಲ್ಲಿ 40-50 ಮನೆಗಳಿದ್ದು, ನೂರಾರು ಜನ ಇಲ್ಲಿ ವಾಸಿಸುತ್ತಿದ್ದಾರೆ. ಸರಿಯಾದ ರಸ್ತೆಯಿಲ್ಲ ಎಂದು ಶಾಲೆಯ ವಾಹನಗಳು ಬಡಾವಣೆಗೆ ಬರುತ್ತಿಲ್ಲ. ಇದರ ಜತೆ ಮಧ್ಯಾಹ್ನವೇ ಮಹಿಳೆಯರು, ಮಕ್ಕಳು ಮನೆಯಿಂದ ಹೊರಗಡೆ ಬರಲು ಹೆದರುತ್ತಿದ್ದಾರೆ. ಆಯುಕ್ತರು ಸದ್ಯ ಭರವಸೆ ನೀಡಿದ್ದು, ಇನ್ನೂ ಚುನಾವಣೆಗೆ ಸಮಯವಿರುವ ಕಾರಣ ಕಾಯುತ್ತೇವೆ. ಒಂದು ವೇಳೆ ಮೂಲಸೌಲಭ್ಯ ಒದಗಿಸದಿದ್ದರೆ ಚುನಾವಣೆ ಬಹಿಷ್ಕಾರ ಇಲ್ಲವೇ ಮುಂದೆ ಏನು ಮಾಡಬೇಕು ಎನ್ನುವದನ್ನು ಬಡಾವಣೆಯ ಹಿರಿಯರು ಸೇರಿ ಚರ್ಚೆ ನಡೆಸುತ್ತೇವೆ’ ಎಂದು ಎಚ್ಚರಿಸಿದರು.