ಮುದ್ದೇಬಿಹಾಳ : ಪತ್ನಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸೋತ ದ್ವೇಷದಿಂದ ಪಡಿತರ ವಿತರಣೆಯಲ್ಲಿ ಅನ್ಯಾಯ ಮಾಡಿದ್ದ ನ್ಯಾಯಬೆಲೆ ಅಂಗಡಿಯವನಿಗೆ ಮತ್ತೆ ಪಡಿತರ ವಿತರಿಸಲು ಅವಕಾಶ ನೀಡಬಾರದು ಎಂದು ತಾಲೂಕಿನ ಅಡವಿ ಹುಲಗಬಾಳ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಗ್ರಾ. ಪಂ ಚುನಾವಣೆಯಲ್ಲಿ ಸೋತಿದ್ದಕ್ಕಾಗಿ ದ್ವೇಷದಿಂದ ಗ್ರಾಮ ಮತ್ತು ತಾಂಡಾದ 200 ಅಧಿಕ ಕುಟುಂಬಗಳಿಗೆ ಪಡಿತರ ವಿತರಿಸದೆ ನ್ಯಾಯಬೆಲೆ ಅಂಗಡಿಯಾತ ಅನ್ಯಾಯ ಮಾಡುತ್ತಿದ್ದ. ಗ್ರಾಮಸ್ಥರು ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಿದ ಕಾರಣ, ನ್ಯಾಯಬೆಲೆ ಅಂಗಡಿಯ ಪರವಾನಗಿ ರದ್ದಾಗಿದೆ. ಹಾಗಾಗಿ, ಆತನಿಗೆ ಮತ್ತೆ ಪಡಿತರ ವಿತರಿಸಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿ, ಗ್ರಾಮಸ್ಥರು ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.
ಈ ಸಂದರ್ಭದ ಗ್ರಾ.ಪಂ ಅಧ್ಯಕ್ಷ ದ್ಯಾಮಣ್ಣ ಹಂಚಿನಾಳ ಮಾತನಾಡಿ, ಅಡವಿ ಹುಲಗಬಾಳದಲ್ಲಿ ಪಡಿತರ ವಿತರಿಸುವ ಚನ್ನಬಸಪ್ಪ ಗುಡಗುಂಟಿ, ಕಳೆದ ಗ್ರಾ.ಪಂ ಚುನಾವಣೆಯಲ್ಲಿ ತನ್ನ ಪತ್ನಿಯನ್ನು ಸ್ಪರ್ಧೆಗೆ ನಿಲ್ಲಿಸಿದ್ದನು. ಚುನಾವಣೆಯಲ್ಲಿ ಅವರು ಸೋಲನುಭವಿಸಿದ್ದರು. ಈ ಕಾರಣಕ್ಕೆ ಗ್ರಾಮಸ್ಥರಿಗೆ ಸರಿಯಾಗಿ ಪಡಿತರ ಹಂಚುತ್ತಿರಲಿಲ್ಲ. ಈ ಬಗ್ಗೆ ಕೇಳಲು ಹೋದವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಚುನಾವಣೆಯಲ್ಲಿ ನನ್ನ ಹೆಂಡತಿಯನ್ನು ಸೋಲಿಸಿದ ದುಷ್ಟ ಜನರು ನೀವು, ನಿಮ್ಮಂತಹ ನಾಲಾಯಕರಿಗೆ ಅಕ್ಕಿ, ಗೋಧಿ ಯಾಕೆ ಕೊಡಬೇಕು ? ಅಕ್ಕಿ, ಗೋಧಿ ಒಯ್ಯಲು ನಾಚಿಕೆಯಾಗುವುದಿಲ್ಲವೇ ? ಬೈದಿದ್ದಾನೆ. ಈ ಸಂಬಂಧ ಮೇಲಾಧಿಕಾರಿಗಳಿಗೆ ದೂರು ನೀಡಿದ್ದೇವೆ. ಅದರಂತೆ, ಚನ್ನಬಸಪ್ಪನ ನ್ಯಾಯಬೆಲೆ ಅಂಗಡಿಯ ಪರವಾನಗಿ ರದ್ದುಗೊಳಿಸಲಾಗಿದೆ ಎಂದು ಹೇಳಿದರು.