ವಿಜಯಪುರ: ಜಿಲ್ಲೆಯಲ್ಲಿ ಬರಗಾಲದ ಛಾಯೆ ಆವರಿಸಿಕೊಂಡಿದ್ದು, ಕಳೆದ ಹತ್ತು ವರ್ಷಗಳಿಂದ ಆ ಗ್ರಾಮಕ್ಕೆ ಕುಡಿವ ನೀರಿನ ಸಮಸ್ಯೆ ಮಾತ್ರ ಕಟ್ಟಿಟ್ಟ ಬುತ್ತಿಯಾಗಿದೆ.
ಹೌದು... ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿಜ್ಜೂರ ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ಇನ್ನು ಬಗೆಹರಿದಿಲ್ಲ. ಗ್ರಾಮದಿಂದ ಕೇವಲ 1 ಕಿ.ಮೀ ದೂರದಲ್ಲಿ ಕೃಷ್ಣಾ ನದಿ ಹರಿಯುತ್ತಿದ್ದರೂ ಈ ಗ್ರಾಮಸ್ಥರಿಗೆ ಮಾತ್ರ ನೀರು ಸಮರ್ಪಕವಾಗಿ ಸಿಗುತ್ತಿಲ್ಲ. ಗ್ರಾಮ ಪಂಚಾಯತಿ ಅಧಿಕಾರಿಗಳು ಕೂಡ ಕುಡಿಯುವ ನೀರು ಕಲ್ಪಿಸುವ ಗೋಜಿಗೆ ಹೋಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
1600 ಜನ ಇರುವ ಈ ಗ್ರಾಮಕ್ಕೆ ಕೇವಲ ಒಂದು ಶುದ್ಧ ಕುಡಿವ ನೀರಿನ ಘಟಕ ಇದೆ. ಅಲ್ಲಿ ಕೂಡ ಸರಿಯಾದ ನಿರ್ವಹಣೆ ಇಲ್ಲ. ಅಷ್ಟೆ ಅಲ್ಲದೇ ಗ್ರಾಮದಲ್ಲಿ ಕೇವಲ ಒಂದು ಬಾವಿ ಇದ್ದು, ಅದು ಕೂಡ ಕಲುಷಿತ ನೀರಿನಿಂದ ತುಂಬಿ ಹೋಗಿದೆ. ಅದೇ ನೀರು ಕುಡಿದು ಜನ ಬದುಕುತ್ತಿದ್ದಾರೆ. ಆ ಬಾವಿ ಸುತ್ತ ಮುತ್ತ ಬರೀ ಗಲೀಜು, ಗಬ್ಬು ವಾಸನೆ. ಕುಡಿವ ನೀರಿನ ಬಾವಿ ಸುತ್ತ ಸ್ವಚ್ಛವಾಗಿಡಬೇಕೆಂದು ಸೂಚಿಸಿದ್ದರೂ ಗ್ರಾಮ ಪಂಚಾಯತಿ ಅಧಿಕಾರಿಗಳು ಮಾತ್ರ ತಮ್ಮದೇ ದರ್ಬಾರ್ ನಡೆಸುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಅಂತಾರೆ ಗ್ರಾಮಸ್ಥರು.
ನೀರಿಗಾಗಿ ಪರದಾಡುತ್ತಿರುವ ಗ್ರಾಮಸ್ಥರು ಇನ್ನು ಸಂಗೊಳ್ಳಿರಾಯಣ್ಣ ವೃತ್ತದಿಂದ ದುರ್ಗಮ್ಮ ದೇವಿ ದೇವಸ್ಥಾನ ಅಡಿ ಬರುವ ಮನೆಗಳಿಗೆ ಈವರೆಗೂ ನಲ್ಲಿ ನೀರಿನ ಸಂಪರ್ಕ ಕಲ್ಪಿಸಿಲ್ಲ. ಇಲ್ಲಿಯ ಜನರು ಅನೇಕ ಮೈಲಿ ವರೆಗೆ ನಡೆದುಕೊಂಡು ಹೋಗಿ ನೀರು ತರುವಂತ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಬೌಹಳ್ಳಿ ಯೋಜನೆ ಅಡಿ ನದಿಯಿಂದ ಪೈಪ್ ಲೈನ್ ಮಾಡುವ ಯೋಜನೆ ಅರ್ಧಕ್ಕೆ ನಿಂತು ಹೋಗಿದೆ. ಅದನ್ನು ಸರಿಪಡಿಸುವಲ್ಲೂ ಗ್ರಾಮ ಪಂಚಾಯತಿ ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದಾರೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಕೊನೇ ಪಕ್ಷ ಟ್ಯಾಂಕರ್ಗಳ ಮೂಲಕವಾದರೂ ಗ್ರಾಮಕ್ಕೆ ನೀರು ಸರಬರಾಜು ಮಾಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ. ಇಲ್ಲದಿದ್ದರೆ ಮುಂದೊಂದು ದಿನ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.