ವಿಜಯಪುರ:ರೊಚ್ಚಿಗೆದ್ದ ಗ್ರಾಮಸ್ಥರುಮತಯಂತ್ರ ಮತ್ತು ವಿವಿಪ್ಯಾಟ್ ಮಷಿನ್‌ಗಳನ್ನು ಪುಡಿಗಟ್ಟಿರುವ ಘಟನೆ ಜಿಲ್ಲೆಯ ಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದಲ್ಲಿ ಇಂದು ನಡೆದಿದೆ. ಇವಿಎಂ ಯಂತ್ರದಲ್ಲಿ ದೋಷ ಕಂಡುಬಂದಿದ್ದು, ಅಧಿಕಾರಿಗಳು ಮತದಾನ ಕಾರ್ಯ ಸ್ಥಗಿತಗೊಳಿಸಿ ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ವಾಪಸ್ ಕೊಂಡೊಯ್ಯುತ್ತಿದ್ದರು. ಮೀಸಲು ಇಡಲಾಗಿದ್ದ ಮಶಿನ್‌ಗಳನ್ನೂ ತೆಗೆದುಕೊಂಡು ಹೋಗುವುದನ್ನು ಗಮನಿಸಿದ ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಇದಕ್ಕೆ ಸಿಬ್ಬಂದಿ ಸರಿಯಾಗಿ ಉತ್ತರಿಸಲಿಲ್ಲ ಎಂದು ತಿಳಿದುಬಂದಿದೆ. ಇದರಿಂದ ಕೋಪಗೊಂಡು ಮತಯಂತ್ರಗಳನ್ನು ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.
ಗ್ರಾಮಸ್ಥರು ಅಧಿಕಾರಿಗಳ ಕಾರನ್ನೂ ಜಖಂಗೊಳಿಸಿದ್ದಾರೆ. ಸಿಬ್ಬಂದಿಗೆ ಥಳಿಸಿದ್ದಾರೆ ಎಂಬ ಆರೋಪವಿದೆ. ಸುದ್ದಿ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಸ್ಥಿತಿ ತಿಳಿಗೊಳಿಸಿದರು. ಮಸಬಿನಾಳ ಗ್ರಾಮದಲ್ಲಿ ಬಿಗುವಿನ ವಾತಾವರಣವಿದ್ದು ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ಜಿಲ್ಲಾಧಿಕಾರಿ, ಎಸ್ಪಿ ಭೇಟಿ :ಪ್ರಕರಣ ಸಂಬಂಧ ಸ್ಥಳಕ್ಕೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಮಸಬಿನಾಳ ಗ್ರಾಮಕ್ಕೆ ಭೇಟಿ ನೀಡಿದರು. ಘಟನೆ ಬಗ್ಗೆ ಬಸವನ ಬಾಗೇವಾಡಿ ಡಿವೈಎಸ್‌ಪಿಯಿಂದ ಮಾಹಿತಿ ಕಲೆ ಹಾಕಿದರು. ಈ ಬಗ್ಗೆ ಸ್ಪಷ್ಟಿಕರಣ ನೀಡಿದ ಸೆಕ್ಟರ್ ಅಧಿಕಾರಿ, ಜನರ ತಪ್ಪು ಕಲ್ಪನೆಯಿಂದಾಗಿ ಈ ಘಟನೆ ನಡೆದಿದೆ ಎಂದು ಡಿಸಿಯವರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ವಿವಿಪ್ಯಾಟ್, ಇವಿಎ ಯಂತ್ರ ಒಡೆದು ಹಾಕಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಡಿಸಿ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.