ಮುದ್ದೇಬಿಹಾಳ(ವಿಜಯಪುರ): ಬ್ಲಾಕ್ ಫಂಗಸ್ (ಕಪ್ಪು ಶಿಲೀಂಧ್ರ) ರೋಗಕ್ಕೆ ತಾಲೂಕಿನ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಬಲಿಯಾಗಿರುವ ಘಟನೆ ಬುಧವಾರ ನಡೆದಿದೆ.
ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮ ಪಂಚಾಯತ್ ಸದಸ್ಯ ಸಿದ್ದಲಿಂಗಪ್ಪ ಎಂ. ಮಲ್ಲಣ್ಣವರ(48) ಸಾವನ್ನಪ್ಪಿದವರು. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗುವ ಮುನ್ನ ಗ್ರಾಪಂ ಸದಸ್ಯ ಮಲ್ಲಣ್ಣವರ ಅವರಿಗೆ ಮೊದಲು ಕೋವಿಡ್ ಪಾಸಿಟಿವ್ ಬಂದಿತ್ತು. ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರಿಸ್ಥಿತಿ ಕೈ ಮೀರುವುದನ್ನು ಅರಿತ ಕುಟುಂಬದವರು ವೈದ್ಯರ ಸಲಹೆಯ ಮೇರೆಗೆ ಅವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಮಲ್ಲಣ್ಣವರಿಗೆ ಬ್ಲಾಕ್ ಫಂಗಸ್ ಸೋಂಕು ತಗುಲಿತ್ತು ಎಂದು ವೈದ್ಯರು ತಮಗೆ ಮಾಹಿತಿ ನೀಡಿದ್ದಾರೆ ಎಂದು ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ.