ಕರ್ನಾಟಕ

karnataka

ETV Bharat / state

ವಿಜಯಪುರ ನೂತನ ಜಿ.ಪಂ. ಅಧ್ಯಕ್ಷೆಯ ಗ್ರಾಮ ವಾಸ್ತವ್ಯ: ಕುರಿಗಾಹಿಗಳ ಸಮಸ್ಯೆಗೆ ಸ್ಪಂದನೆ

ವಿಜಯಪುರ ಜಿಲ್ಲಾ ಪಂಚಾಯ್ತಿ ನೂತನ ಅಧ್ಯಕ್ಷೆ ಸುಜಾತ ಕಳ್ಳಿಮನಿ ಇಟ್ಟಂಗಿಹಾಳ ಗ್ರಾಮದಲ್ಲಿ ಗ್ರಾಮವಾಸ್ತವ್ಯ ಹೂಡುವ ಮೂಲಕ ಕುರಿಗಾಹಿಗಳ ಸಮಸ್ಯೆಗಳನ್ನು ಆಲಿಸಿದ್ದಾರೆ.

vijaypur  zp president stay in village
ಜಿಲ್ಲಾ ಪಂಚಾಯ್ತಿ ನೂತನ ಅಧ್ಯಕ್ಷೆ

By

Published : Sep 5, 2020, 5:42 PM IST

ವಿಜಯಪುರ:ಜಿಲ್ಲೆಯತಾಂಡಾದಲ್ಲಿ ಹೆಚ್ಚಾಗಿ ವಾಸಿಸುವ ಕುರಿಗಾಹಿಗಳು, ಗ್ರಾಮಸ್ಥರ ಮೂಲಭೂತ ಸಮಸ್ಯೆಗಳನ್ನು ಆಲಿಸಲು ವಿಜಯಪುರ ಜಿಲ್ಲಾ ಪಂಚಾಯ್ತಿ ನೂತನ ಅಧ್ಯಕ್ಷೆ ಸುಜಾತ ಕಳ್ಳಿಮನಿ ತಾಲೂಕಿನ ಇಟ್ಟಂಗಿಹಾಳ ಗ್ರಾಮದಲ್ಲಿ ವಾಸ್ತವ್ಯ ಮಾಡುವ ಮೂಲಕ ಜಿಲ್ಲೆಯಲ್ಲಿ ವಿನೂತನ ಸಂಪ್ರದಾಯಕ್ಕೆ ನಾಂದಿ ಹಾಡಿದರು.

ಜಿಲ್ಲಾ ಪಂಚಾಯ್ತಿ ನೂತನ ಅಧ್ಯಕ್ಷೆ
ಜಿ.ಪಂ. ಅಧ್ಯಕ್ಷೆಯನ್ನು ಗ್ರಾಮಸ್ಥರು ಡೊಳ್ಳು ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಅದ್ದೂರಿಯಾಗಿ ಬರಮಾಡಿಕೊಂಡರು. ಈ ವೇಳೆ ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಜಿ.ಪಂ. ಅಧ್ಯಕ್ಷೆ ಸುಜಾತ ಕಳ್ಳಿಮನಿ ಹೂ ಮಾಲೆ ಹಾಕಿ ಗೌರವ ಸಲ್ಲಿಸಿದರು. ನಂತರ ಗ್ರಾಮ ವಾಸ್ತವ್ಯ ಮಾಡಬೇಕಾದ ಇಟ್ಟಂಗಿಹಾಳ ಅಡವಿ ತಾಂಡಕ್ಕೆ ಆಗಮಿಸಿ ತಮ್ಮ ಗ್ರಾಮ ವಾಸ್ತವ್ಯದ ಉದ್ದೇಶ ಹಾಗೂ ಇದರಿಂದ ಗ್ರಾಮಸ್ಥರಿಗೆ ಆಗುವ ಅನುಕೂಲದ ಬಗ್ಗೆ ವಿವರಿಸಿದರು. ಕುರಿಗಾಹಿಗಳ ಜತೆ ಸಂವಾದ ನಡೆಸಿದ ಜಿ.ಪಂ. ಅಧ್ಯಕ್ಷೆ ಅವರ ಸಮಸ್ಯೆ ಆಲಿಸಿದರು.
ಮುಖ್ಯವಾಗಿ ಕುರಿ ಕಳ್ಳತನ ಹೆಚ್ಚಾಗುತ್ತಿದೆ. ಅವುಗಳ ರಕ್ಷಣೆಗೆ ಪೊಲೀಸ್ ಭದ್ರತೆ ಒದಗಿಸಬೇಕು ಎನ್ನುವ ವಿಚಿತ್ರ ಬೇಡಿಕೆಯನ್ನು ಕುರಿಗಾಹಿಗಳು ಅವರ ಮುಂದಿಟ್ಟರು. ಇದರ ಜತೆ ಕುರಿ ಕಾಯಲು ಜಾಗ ಸೇರಿದಂತೆ ವಿವಿಧ ಸೌಲಭ್ಯಗಳ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದರು. ರಾತ್ರಿ ಗ್ರಾಮಸ್ಥರ ಅಹವಾಲುಗಳನ್ನು ಸ್ವೀಕರಿಸಿದ ಅಧ್ಯಕ್ಷೆ ಸುಜಾತ ಕಳ್ಳಿಮನಿ ಕುರಿ ಕಟ್ಟುವ ದೊಡ್ಡಿಯಲ್ಲಿ ಮಲಗಿಕೊಂಡು ಗ್ರಾಮ ವಾಸ್ತವ್ಯ ನಡೆಸಿದರು.
ಮುಂಜಾನೆ ಸುಜಾತ ಕಳ್ಳಿಮನಿ ತಮ್ಮ ಪತಿ ಹಾಗೂ ಕಾರ್ಯಕರ್ತರ ಜತೆ ಸೇರಿ ಗ್ರಾಮದಲ್ಲಿ ಗ್ರಾಮ ಸಂಚಾರ ನಡೆಸಿದರು. ಈ ವೇಳೆ ಬಯಲು ಶೌಚಕ್ಕೆ ಹೋಗುತ್ತಿದ್ದ ಪುರುಷರು, ಮಹಿಳೆಯರನ್ನು ತಡೆದು ಅವರ ಕೊರಳಿಗೆ ಹೂವಿನ ಹಾರ ಹಾಕಿ ಬಯಲು ಶೌಚಾಲಯದಿಂದ ಆಗುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಿದರು.

ಬಯಲು ಶೌಚ ಮುಕ್ತಗೊಳಿಸಲು ಗ್ರಾಮದಲ್ಲಿ ಅವಶ್ಯವಿರುವ ಶೌಚಾಲಯಗಳ ಪಟ್ಟಿಯನ್ನು ಅಧಿಕಾರಿಗಳಿಂದ ಪಡೆದು ಶೀಘ್ರ ಅವಶ್ಯಕ ಶೌಚಾಲಯ ನಿರ್ಮಿಸುವ ಭರವಸೆ ನೀಡಿದರು. ಇನ್ನು ಸುಜಾತ ಕಳ್ಳಿಮನಿ ಗ್ರಾಮ ವಾಸ್ತವ್ಯ ಮಾಡಿದ ಮೊದಲ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಎನ್ನುವ ಹೆಗ್ಗಳಿಕೆಗೆ ಭಾಜನರಾದರು.

ABOUT THE AUTHOR

...view details