ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ ಜಿಲ್ಲಾ ಪಂಚಾಯತ್​​ ಅಧ್ಯಕ್ಷ ಗಾದಿಗೆ ಪೈಪೋಟಿ - vijaypur zp issue latest news

ವಿಜಯಪುರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಭಾರಿ ಪೈಪೋಟಿ ನಡೆಯುತ್ತಿದೆ. ಅತಿ ಹೆಚ್ಚು ಸ್ಥಾನಗಳನ್ನು ಹೊಂದಿದ್ರೂ ಅಧಿಕಾರದಿಂದ ವಂಚಿತರಾಗಿರುವ ಬಿಜೆಪಿ ತೆರೆಮೆರೆಯಲ್ಲಿ ಜೆಡಿಎಸ್- ಪಕ್ಷೇತರ ಅಭ್ಯರ್ಥಿಗಳನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿದೆ ಎನ್ನಲಾಗ್ತಿದೆ.

vijaypur zp issue latest news
ಜಿಲ್ಲಾ ಪಂಚಾಯತ್​​ ಅಧ್ಯಕ್ಷ ಗಾದಿಗೆ ಪೈಪೋಟಿ

By

Published : Jun 10, 2020, 2:09 PM IST

ವಿಜಯಪುರ:ವಿಜಯಪುರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯ ಶಿವಯೋಗೆಪ್ಪ ನೆದಲಗಿ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಮುಂದಿನ ಜಿ.ಪಂ.ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದೆ.

ಕಾಂಗ್ರೆಸ್ ಸಾರವಾಡ ಜಿ.ಪಂ.ಕ್ಷೇತ್ರದ ಸದಸ್ಯೆ ಸುಜಾತ ಕಳ್ಳಮನಿ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಇತ್ತ ಪಂಚಾಯತ್​​ನಲ್ಲಿ ಅತಿ ಹೆಚ್ಚು ಸ್ಥಾನ ಹೊಂದಿದ್ರೂ ಅಧಿಕಾರದಿಂದ ವಂಚಿತರಾಗಿರುವ ಬಿಜೆಪಿ ತೆರೆಮೆರೆಯಲ್ಲಿ ಜೆಡಿಎಸ್- ಪಕ್ಷೇತರ ಅಭ್ಯರ್ಥಿಗಳನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಜಿಲ್ಲಾ ಪಂಚಾಯತ್​​ ಅಧ್ಯಕ್ಷ ಗಾದಿಗೆ ಪೈಪೋಟಿ

ವಿಜಯಪುರ ಜಿಲ್ಲಾ ಪಂಚಾಯಿತಿ ಒಟ್ಟು 42 ಸದಸ್ಯ ಬಲ ಹೊಂದಿದೆ. 22 ಸ್ಥಾನ ಹೊಂದಿರುವವರು ಅಧಿಕಾರದ ಗದ್ದುಗೆ ಹಿಡಿಯಬಲ್ಲರು. ಬಿಜೆಪಿ-20, ಕಾಂಗ್ರೆಸ್-18, ಜೆಡಿಎಸ್-3 ಹಾಗೂ ಪಕ್ಷೇತರ ಅಭ್ಯರ್ಥಿ ಓರ್ವ ಸದಸ್ಯರಿದ್ದಾರೆ. ಕಳೆದ ಮೂರೂವರೆ ವರ್ಷದಿಂದ ಕಾಂಗ್ರೆಸ್-ಜೆಡಿಎಸ್ ಜಂಟಿಯಾಗಿ ಅಧಿಕಾರ ಅನುಭವಿಸುತ್ತಿವೆ.

ಕಾಂಗ್ರೆಸ್‍ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮೊದಲಿನಿಂದಲೂ ಪೈಪೋಟಿ ಇದೆ. ಮಾಜಿ ಸಚಿವರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಶಾಸಕ ಯಶವಂತರಾಯ ಗೌಡ ಪಾಟೀಲ ತಮ್ಮ ಬೆಂಬಲಿಗರನ್ನು ಅಧ್ಯಕ್ಷ ಸ್ಥಾನಕ್ಕೆ ತರಲು ಪ್ರಯತ್ನ ನಡೆಸುತ್ತಲೇ ಇರುತ್ತಾರೆ. ಈ ರೀತಿ ಒಳ ಜಗಳ ಬೇಡವೆಂದು ಪ್ರತಿ ಅಧ್ಯಕ್ಷ ಸ್ಥಾನ 30 ತಿಂಗಳ ಅವಧಿಗೆ ಹಂಚಿಕೆ ಮಾಡಲಾಗಿತ್ತು. ಇಲ್ಲಿಯವರೆಗೆ ಇದೇ ರೀತಿಯಾಗಿ ನಡೆದುಕೊಂಡು ಬಂದಿತ್ತು.

ಶಾಸಕ ಯಶವಂತರಾಯ ಗೌಡ ಪಾಟೀಲ ಬೆಂಬಲಿಗ ಶಿವಯೋಗೆಪ್ಪ ನೆದಲಗಿ ಅಧ್ಯಕ್ಷರಾದ ಮೇಲೆ ಅವರನ್ನು 15 ತಿಂಗಳ ಅವಧಿಗೆ ಮಾತ್ರ ಸೀಮಿತಗೊಳಿಸಿ ಕೊನೆಯ ಅವಧಿಯನ್ನು ಮತ್ತೊಬ್ಬರಿಗೆ ನೀಡುವ ತೀರ್ಮಾನ ನೀಡಿರುವುದು ಕಾಂಗ್ರೆಸ್‍ನಲ್ಲಿ ಒಳಜಗಳಕ್ಕೆ ಕಾರಣವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಣತಿಯಂತೆ ಶಿವಯೋಗೆಪ್ಪ ನೆದಲಗಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಅವರ ರಾಜಕೀಯ ಗುರು ಶಾಸಕ ಯಶವಂತರಾಯ ಗೌಡ ಪಾಟೀಲ ಮೇಲೆ ಮಾತ್ರ ಮುನಿಸಿಕೊಂಡಿದ್ದಾರೆ. ಒಪ್ಪಂದದಂತೆ, 30 ತಿಂಗಳ ಅವಧಿ ಪೂರ್ಣಗೊಳಿಸಲು ಜಿಲ್ಲಾ ಪ್ರಮುಖ ಮುಖಂಡರ ಮೇಲೆ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ ಎನ್ನುವ ಮುನಿಸಿದೆ ಎಂದೇ ಹೇಳಲಾಗುತ್ತಿದೆ.

ಇನ್ನೊಂದೆಡೆ ಮಾಜಿ ಸಚಿವ ಎಂ.ಬಿ.ಪಾಟೀಲ ಅವರ ಕಟ್ಟಾ ಬೆಂಬಲಿಗಳಾಗಿರುವ ಜಿ.ಪಂ.ಸದಸ್ಯೆ ಸುಜಾತ ಕಳ್ಳಿಮನಿ ಅಧ್ಯಕ್ಷ ಗಾದಿಗೇರಲು ಇನ್ನಿಲ್ಲದ ಸರ್ಕಸ್ ನಡೆಸುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಗಳೂರಿಗೆ ಹೋಗಿ ಖುದ್ದು ಭೇಟಿಯಾಗಿರುವ ಕಳ್ಳಿಮನಿ, ಎಂ.ಬಿ. ಪಾಟೀಲರ ಕೃಪಾ ಕಟಾಕ್ಷದಿಂದ ಅಧ್ಯಕ್ಷ ಸ್ಥಾನ ಅಲಂಕರಿಸುವ ಕನಸು ಕಾಣುತ್ತಿದ್ದಾರೆ.

ಇತ್ತ ಭಿನ್ನಮತದಿಂದ ಬಸವಳಿದಿರುವ ಜಿಲ್ಲಾ ಬಿಜೆಪಿ ಕೊನೆಯ ಅವಧಿಯಾದರೂ ತಮಗೆ ಧಕ್ಕಬೇಕೆಂದು ಕಸರತ್ತು ನಡೆಸಿದೆ. ಜಿ.ಪಂ.ನಲ್ಲಿ ಅತಿ ಹೆಚ್ಚು ಸ್ಥಾನ ಹೊಂದಿರುವ ಬಿಜೆಪಿಗೆ ಗುಂಪುಗಾರಿಕೆಯೇ ಮಗ್ಗುಲ ಮುಳ್ಳಾಗಿದೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ನಡುವೆ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರಿಗೆ ದಿಕ್ಕು ತೋಚದಂತಾಗಿದೆ.

ABOUT THE AUTHOR

...view details