ವಿಜಯಪುರ: ಜಿಲ್ಲಾ ಪಂಚಾಯಿತಿ ಕೊನೆಯ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಜೂನ್ 30ರಂದು ಚುನಾವಣೆ ನಡೆಯಲಿದ್ದು, ಅಧಿಕಾರದ ಗದ್ದುಗೆ ಹಿಡಿಯಲು ಕಾಂಗ್ರೆಸ್-ಬಿಜೆಪಿ ರಾಜಕೀಯ ಕಸರತ್ತು ಆರಂಭಿಸಿವೆ.
ವಿಜಯಪುರ ಜಿಲ್ಲಾ ಪಂಚಾಯತ್ ಚುನಾವಣೆ ಬಿಜೆಪಿ ತನ್ನ ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ಗೌಪ್ಯ ಸ್ಥಳದಲ್ಲಿ ಬೀಡು ಬಿಟ್ಟಿದ್ದರೆ, ಕಾಂಗ್ರೆಸ್ ತನ್ನ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಿದ್ದು, ತಮಗೆ ಬೆಂಬಲಿಸಲು ಜೆಡಿಎಸ್, ಪಕ್ಷೇತರರ ಅಭ್ಯರ್ಥಿಗಳ ಮನೆ ಕಾಯುತ್ತಿದೆ.
ವಿಜಯಪುರ ಜಿಲ್ಲಾ ಪಂಚಾಯಿತಿಯಲ್ಲಿ ಒಟ್ಟು 42 ಸದಸ್ಯರ ಬಲವಿದ್ದು, ಬಿಜೆಪಿ-20, ಕಾಂಗ್ರೆಸ್-18, ಜೆಡಿಎಸ್-3 ಹಾಗೂ ಪಕ್ಷೇತರ ಸದಸ್ಯರಿದ್ದಾರೆ. ಗೆಲುವಿಗೆ 22 ಸದಸ್ಯ ಬಲದ ಅವಶ್ಯವಿದೆ. ಕಾಂಗ್ರೆಸ್ ಮುಖಂಡರು ಮಾಡಿಕೊಂಡ ಅಧಿಕಾರ ಹಂಚಿಕೆ ಸೂತ್ರದಂತೆ ಹಿಂದಿನ ಅಧ್ಯಕ್ಷ ಶಿವಯೋಗೆಪ್ಪ ನೆದಲಗಿ ರಾಜೀನಾಮೆಯಿಂದ ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೆ ಸಾರವಾಡ ಜಿ.ಪಂ.ಕ್ಷೇತ್ರದ ಸದಸ್ಯೆ ಸುಜಾತಾ ಕಳ್ಳಿಮನಿ ಏಕ ಅಭ್ಯರ್ಥಿಯಾಗಿದ್ದಾರೆ. ಈಗಾಗಲೇ ಜೆಡಿಎಸ್ ಸದಸ್ಯರ ಜತೆ ಮಾತುಕತೆ ನಡೆಸಿದ್ದು, ಅವರ ಬೆಂಬಲದ ನಿರೀಕ್ಷೆಯಲ್ಲಿ ಅಧ್ಯಕ್ಷ ಸ್ಥಾನವನ್ನು ಮತ್ತೊಮ್ಮೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ವಿಶ್ವಾಸದಲ್ಲಿದೆ.
ಬಿಜೆಪಿ ಜಿಲ್ಲಾ ಪಂಚಾಯತ್ನಲ್ಲಿ ಹೆಚ್ಚು ಸದಸ್ಯರನ್ನು ಹೊಂದಿದ್ದರೂ ಅಧಿಕಾರದಿಂದ ವಂಚಿತವಾಗಿದೆ. ಈ ಬಾರಿ ಅಧಿಕಾರದ ಗದ್ದುಗೆ ಹಿಡಿಯಲು ಎಲ್ಲ ರೀತಿಯ ಕಸರತ್ತು ನಡೆಸಿದೆ. ಪಕ್ಷದ ಒಳಗಿನ ಭಿನ್ನಮತ ಶಮನಗೊಳಿಸಿ ಅಧಿಕಾರದ ಪಡೆಯುವ ಸವಾಲು ಅದರ ಮುಂದಿದೆ. ಅಧ್ಯಕ್ಷ ಸ್ಥಾನಕ್ಕೆ ಸ್ಥಾನದ ಚುನಾವಣೆ ನಡೆಸಲು ಜಿಲ್ಲಾಡಳಿತ ಸಹ ಸಂಪೂರ್ಣ ಸಿದ್ಧಗೊಂಡಿದೆ. ಕೊರೊನಾ ಭೀತಿಯಿಂದ ಪ್ರತಿ ಸದಸ್ಯರು, ಜನಪ್ರತಿನಿಧಿಗಳನ್ನು ಸ್ಕ್ರೀನಿಂಗ್ ಟೆಸ್ಟ್ ನಡೆಸಲಿದೆ. ಸಾಮಾಜಿಕ ಅಂತರ ಕಾಪಾಡಲು ಯಾವುದೇ ವಿಜಯೋತ್ಸವ ಆಚರಿಸುವುದಕ್ಕೂ ಕಡಿವಾಣ ಬಿದ್ದಿದೆ.
ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲು ಈಗಾಗಲೇ ಬಿಜೆಪಿ ಸದಸ್ಯರ ಜೊತೆ ಒಳ ಒಪ್ಪಂದ ಮಾಡಿಕೊಂಡಿರುವ ವಿಚಾರ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ. ಏಕೈಕ ಪಕ್ಷೇತರ ಸದಸ್ಯ ಆಂತರಿಕವಾಗಿ ಬಿಜೆಪಿ ಜತೆ ಗುರುತಿಸಿಕೊಂಡಿದ್ದು, ಕಾಂಗ್ರೆಸ್ಗೆ ನುಂಗಲಾರದ ತುತ್ತಾಗಿದೆ. ಈಗ ಏನಿದ್ದರೂ ಒಡೆದ ಮನೆಯಾಗಿರುವ ಬಿಜೆಪಿ ಸದಸ್ಯರ ಬೆಂಬಲ ಮಾತ್ರ ಕಾಂಗ್ರೆಸ್ ಕೈ ಹಿಡಿಯಬಹುದಾಗಿದೆ. ಇದಕ್ಕಾಗಿ ಜೂ. 30ರವರೆಗೆ ಕಾಯಬೇಕು.