ವಿಜಯಪುರ: ಮಹಿಳೆಯನ್ನು ಚುಡಾಯಿಸಿದ್ದಕ್ಕೆ ಇಬ್ಬರು ಯುವಕರ ತಲೆ ಬೋಳಿಸಿ ಮೆರವಣಿಗೆ ಮಾಡಿದ ಪ್ರಕರಣ ಸಂಬಂಧ ಏಳು ಜನ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಜಯಪುರ ತಾಲೂಕಿನ ಹೆಗಡಿಹಾಳ ತಾಂಡಾದಲ್ಲಿ ನಿನ್ನೆ(ಶುಕ್ರವಾರ) ಈ ಘಟನೆ ನಡೆದಿತ್ತು. ದುಡಿಯಲು ಮಹಾರಾಷ್ಟ್ರಕ್ಕೆ ತೆರಳಿದ್ದ ವೇಳೆ ತಮ್ನದೇ ತಾಂಡಾದ ಮಹಿಳೆ ಜತೆ ಇಬ್ಬರು ಯುವಕರು ಅಸಭ್ಯವಾಗಿ ವರ್ತಿಸಿದ್ದರು ಎನ್ನಲಾಗ್ತಿದೆ. ಈ ವಿಷಯವನ್ನು ಮಹಿಳೆ ತಮ್ಮ ಹೆಗಡಿಹಾಳ ತಾಂಡಾದ ಜನರ ಬಳಿ ಹೇಳಿಕೊಂಡಿದ್ದಳು. ಈ ಸಂಬಂಧ ಗ್ರಾಮದ ಹಿರಿಯರು ಆ ಇಬ್ಬರು ಯುವಕರನ್ನು ಮಹಾರಾಷ್ಟ್ರದಿಂದ ಹೆಗಡಿಹಾಳ ತಾಂಡಾಕ್ಕೆ ಕರೆಯಿಸಿಕೊಂಡು ಪಂಚಾಯಿತಿ ನಡೆಸಿ ಇಬ್ಬರು ಯುವಕರಿಗೆ ತಲೆ ಬೋಳಿಸಿ, ಚಪ್ಪಲಿ ಹಾಕಿ ಮೆರವಣಿಗೆ ನಡೆಸುವ ಬಗ್ಗೆ ತೀರ್ಪು ನೀಡಿದ್ದರು.
7 ಜನ ವಶಕ್ಕೆ:ಈ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವಿಜಯಪುರ ಗ್ರಾಮೀಣ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದರು. ನಂತರ ಏಳು ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಮಹಿಳೆಗೆ ಚುಡಾಯಿಸಿದ ಆರೋಪ: ಅವಳಿ ಸಹೋದರರ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ
ಪ್ರಕರಣದ ವಿವರ:ಮಹಿಳೆಯನ್ನು ಚುಡಾಯಿಸಿ, ಅಸಭ್ಯವಾಗಿ ವರ್ತಿಸಿದರೆಂದು ಲಂಬಾಣಿ ಸಮುದಾಯದ ಮುಖಂಡರು ಅವಳಿ ಸಹೋದರರಿಬ್ಬರ ತಲೆಕೂದಲು ಬೋಳಿಸಿ, ಕೊರಳಿಗೆ ಚಪ್ಪಲಿ ಹಾರ ಹಾಕಿ ಗ್ರಾಮದಲ್ಲಿ ಮೆರವಣಿಗೆ ನಡೆಸಿದ ಘಟನೆ ವಿಜಯಪುರ ತಾಲೂಕಿನ ಹೆಗಡಿಹಾಳ ಲಂಬಾಣಿ ತಾಂಡಾದಲ್ಲಿ ನಿನ್ನೆ ನಡೆದಿತ್ತು. ಘಟನೆ ವಿಡಿಯೋಗಳು ವೈರಲ್ ಆಗಿದ್ದವು. ತಾಂಡಾದ ಸಹೋದರರಿಗೆ ಸಮುದಾಯವ ಮುಖಂಡರು ಈ ರೀತಿಯ ಶಿಕ್ಷೆ ನೀಡಿದ್ದಾರೆ ಎನ್ನಲಾಗಿತ್ತು.
ಸಹೋದರರು ಮಹಾರಾಷ್ಟ್ರಕ್ಕೆ ದುಡಿಯಲು ಹೋಗಿದ್ದರು. ಅಲ್ಲಿಗೆ ಮಹಿಳೆಯೂ ಸಹ ಕುಟುಂಬ ಸಮೇತ ದುಡಿಯಲು ಹೋಗಿದ್ದಳು. ಈ ಸಂದರ್ಭದಲ್ಲಿ ಯುವಕರು ಆಕೆಯನ್ನು ಚುಡಾಯಿಸಿ, ಅಸಭ್ಯ ವರ್ತನೆ ತೋರಿದ್ದಾರೆ. ಈ ವಿಚಾರ ತಿಳಿದ ಸಮುದಾಯದ ಮುಖಂಡರು, ಯುವಕರನ್ನು ಗ್ರಾಮಕ್ಕೆ ಕರೆಯಿಸಿದ್ದಾರೆ ಎನ್ನಲಾಗಿತ್ತು. ಲಂಬಾಣಿ ಸಮುದಾಯದಲ್ಲಿ ಕೆಲವು ಕಟ್ಟುಪಾಡುಗಳಿವೆ. ಹಿರಿಯರು ನೀಡುವ ತೀರ್ಪನ್ನು ಎಲ್ಲರೂ ಪಾಲಿಸಬೇಕು. ಮಹಿಳೆಯನ್ನು ಚುಡಾಯಿಸಿ ತಮ್ಮ ಸಮುದಾಯದ ಕಟ್ಟುಪಾಡು ಮೀರಿದ್ದಾರೆ ಎಂದು ಲಂಬಾಣಿ ಸಮುದಾಯದ ಹಿರಿಯರು ಪಂಚಾಯಿತಿ ಸೇರಿಸಿದ್ದರು. ಅಲ್ಲಿ ಈ ಇಬ್ಬರು ಯುವಕರ ತಲೆ ಬೋಳಿಸಿ, ಕೊರಳಿಗೆ ಚಪ್ಪಲಿ ಹಾರ ಹಾಕಿ ಹೆಗಡಿಹಾಳ ತಾಂಡಾದಲ್ಲಿ ಮೆರವಣಿಗೆ ಮಾಡಿದ್ದರು.
ಪ್ರೀತಿಸುತ್ತಿದ್ದ ಜೋಡಿಗೆ ವಿಚಿತ್ರ ಶಿಕ್ಷೆ: ಪರಸ್ಪರ ಪ್ರೀತಿಸುತ್ತಿದ್ದ ಜೋಡಿಗೆ ನ್ಯಾಯ ಪಂಚಾಯ್ತಿ ಒಂದು ವಿಚಿತ್ರ ರೀತಿಯ ಶಿಕ್ಷೆ ನೀಡಿ ಆದೇಶ ಹೊರಡಿಸಿರುವ ಅಮಾನವೀಯ ಘಟನೆ ಒಡಿಶಾದ ಮಯೂರ್ಬಂಜ್ನಲ್ಲಿ ಕಳೆದ ವರ್ಷ ಬೆಳಕಿಗೆ ಬಂದಿತ್ತು. ತಾನು ಪ್ರೀತಿಸುತ್ತಿದ್ದ ಯುವತಿಯನ್ನ ಭೇಟಿಯಾಗಲು ಯುವಕ ಪಕ್ಕದ ಊರಿಗೆ ಹೋಗಿದ್ದಾನೆ. ಈ ವೇಳೆ ಸ್ಥಳೀಯರು ಲವರ್ಸ್ಗಳನ್ನ ಒಂದೇ ರೂಂನಲ್ಲಿರುವುದನ್ನ ನೋಡಿ ಕೂಡಿ ಹಾಕಿದ್ದರು. ಅಷ್ಟೇ ಅಲ್ಲ ಮರುದಿನ ನ್ಯಾಯ ಪಂಚಾಯ್ತಿ ಎದುರು ಹಾಜರು ಪಡಿಸಿದ್ದರು. ಈ ವೇಳೆ ಸ್ಥಳೀಯ ಪಂಚಾಯ್ತಿ, ಅವರಿಬ್ಬರ ತಲೆ ಬೋಳಿಸಿ, ಮೆರವಣಿಗೆ ಮಾಡುವಂತೆ ಆದೇಶ ನೀಡಿತ್ತು. ಅದೇ ರೀತಿ, ಗ್ರಾಮಸ್ಥರು ಪ್ರೇಮಿಗಳ ತಲೆ ಬೋಳಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದರು.
ಇದನ್ನೂ ಓದಿ:ತಲೆ ಬೋಳಿಸಿ, ಮೆರವಣಿಗೆ... ಪ್ರೀತಿಸುತ್ತಿದ್ದ ಜೋಡಿಗೆ ವಿಚಿತ್ರ ಶಿಕ್ಷೆ!