ವಿಜಯಪುರ:ವಾರ್ಡ್ಗಳಿಗೆ ಅನುದಾನ ಹಂಚಿಕೆ ವಿಚಾರದಲ್ಲಿ ನಾಗಠಾಣ ಶಾಸಕ ದೇವಾನಂದ ಚವ್ಹಾಣ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ ಮಧ್ಯೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಬಹಿರಂಗಗೊಂಡಿದೆ.
ಅನುದಾನ ಹಂಚಿಕೆ ವಿಚಾರದಲ್ಲಿ ಜಟಾಪಟಿ ಆಯುಕ್ತರು ಟೆಂಡರ್ ನೀಡುವಲ್ಲಿ ಅವ್ಯವಹಾರ ನಡೆಸಿದ್ದಾರೆ. ಇಡೀ ವಿಜಯಪುರ ನಗರದ ಆಸ್ತಿ ತಮ್ಮ ಆಸ್ತಿ ಎನ್ನುವಂತೆ ವರ್ತಿಸುತ್ತಿದ್ದಾರೆ. ವರ್ಗಾವಣೆಯಾಗಿ ಬೇರೆಡೆ ಹೋಗಿದ್ರೂ, ಮತ್ತೆ ಇಲ್ಲಿಗೆ ಪೋಸ್ಟಿಂಗ್ ಮಾಡಿಸಿಕೊಂಡಿದ್ದಾರೆಂದು ಶಾಸಕ ದೇವಾನಂದ ಚವ್ಹಾಣ ಆರೋಪಿಸಿದ್ದಾರೆ.
ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಪಾಲಿಕೆ ಆಯುಕ್ತ ಹರ್ಷಶೆಟ್ಟಿ, ಶಾಸಕರು ಕೇಳಿದಷ್ಟು ಅನುದಾನ ನೀಡಿಲ್ಲ ಎಂಬ ಕಾರಣಕ್ಕೆ ನನ್ನ ವಿರುದ್ಧ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ನಾಗಠಾಣ ವ್ಯಾಪ್ತಿಗೆ ಬರುವ 4 ವಾರ್ಡ್ಗಳಿಗೆ ಶಾಸಕರು 25 ಕೋಟಿ ರೂಪಾಯಿಯ ಬೇಡಿಕೆ ಸಲ್ಲಿಸಿದ್ದರು. ಆದ್ರೆ, 15 ನೇ ಹಣಕಾಸಿನ ಯೋಜನೆಯಡಿ ಕೇವಲ 10 ಕೋಟಿ ರೂಪಾಯಿ ಮಾತ್ರ ಬಿಡುಗಡೆಯಾಗಿದೆ. ಅದ್ರಲ್ಲಿ 35 ವಾರ್ಡ್ಗಳಿಗೆ ಹಂಚಿಕೆ ಮಾಡಬೇಕಾಗಿದೆ. ಅವರ ಕ್ಷೇತ್ರದ ವಾರ್ಡ್ಗಳಿಗೆ ಎಷ್ಟು ಅನುದಾನ ಹಂಚಿಕೆಯಾಗುತ್ತೋ, ಅಷ್ಟು ಹಣ ನೀಡುವುದಾಗಿ ಪ್ರತಿಕ್ರಿಯಿಸಿದ್ದಾರೆ.
ಈಗಾಗಲೇ ನಾಗಠಾಣ ವಿಧಾನಸಭಾ ಕ್ಷೇತ್ರ ಹರಿದು ಹಂಚಿ ಹೋಗಿದೆ. ನಾಗಠಾಣ ಕ್ಷೇತ್ರ ಇಂಡಿ ತಾಲೂಕಿನ ವ್ಯಾಪ್ತಿಗೆ ಬರುತ್ತೆ. ಆದ್ರೆ, ವಿಜಯಪುರ ನಗರದ ನಾಲ್ಕು ವಾರ್ಡ್ಗಳು ನಾಗಠಾಣ ಕ್ಷೇತ್ರಕ್ಕೆ ಸೇರಿರುವುದಿಂದ ಅನುದಾನ ಹಂಚಿಕೆ ವಿಚಾರದಲ್ಲಿ ಶಾಸಕ ಹಾಗೂ ಪಾಲಿಕೆ ಆಯುಕ್ತರ ನಡುವೆ ವೈಮನಸ್ಸು ಉಂಟಾಗಿದೆ ಎನ್ನಲಾಗಿದೆ. ಇಬ್ಬರ ಜಟಾಪಟಿಯಲ್ಲಿ ನಗರದ ಅಭಿವೃದ್ಧಿಗೆ ಧಕ್ಕೆಯಾಗಬಾರದೆಂಬುದು ಸ್ಥಳೀಯರ ಆಗ್ರಹವಾಗಿದೆ.