ವಿಜಯಪುರ: ಲಾಕ್‌ಡೌನ್ ಅವಧಿಯಲ್ಲಿ ರೈತರ ಕೃಷಿ ಉತ್ಪನ್ನಗಳ ಮಾರಾಟ ಮತ್ತು ಸಾಗಾಟಕ್ಕೆ ಯಾವುದೇ ನಿರ್ಬಂಧ ಇಲ್ಲವೆಂದು ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಸ್ಪಷ್ಟಪಡಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೃಷಿ, ತೋಟಗಾರಿಕೆ, ಎಪಿಎಂಸಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಅವರು, ರೈತರಿಂದ ಬರುವಂತಹ ತರಕಾರಿ, ಹಣ್ಣು ಸೇರಿದಂತೆ ಕೃಷಿ ಉತ್ಪನ್ನಗಳನ್ನು ವರ್ತಕರಿಂದ ವ್ಯಾಪಾರಸ್ಥರಿಗೆ ಮಾರಾಟ ಮಾಡಲು ಮತ್ತು ಮಾರುಕಟ್ಟೆ ಸಂಪರ್ಕ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ರೈತರ ಪಾರಂಪರಿಕ ಕೃಷಿ ಬೆಳೆ ಸೇರಿದಂತೆ ಹಣ್ಣು, ತರಕಾರಿ ಹಾಗೂ ತೋಟಗಾರಿಕಾ ಬೆಳೆಗಳ ಮಾರಾಟಕ್ಕಾಗಿ ಸಂಬಂಧಿಸಿದ ಅಧಿಕಾರಿಗಳು ರೈತರು ಮತ್ತು ವ್ಯಾಪಾರಸ್ಥರ ಮಧ್ಯೆ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸಿ, ಅವರಿಗೆ ತಕ್ಷಣ ಸ್ಪಂದಿಸುವಂತೆ ಸೂಚನೆ ನೀಡಿದರು. ಕೃಷಿ ಉತ್ಪನ್ನ ಸರಬರಾಜಿಗೆ ಯಾವುದೇ ನಿರ್ಬಂಧವಿಲ್ಲ. ರೈತರಿಂದ ಹೋಲ್ ಸೇಲ್ ವ್ಯಾಪಾರಸ್ಥರು ನಂತರ ರಿಟೇಲರ್ಗಳ ಮೂಲಕ ಜನರಿಗೆ ತಲುಪುವಂತಾಗಬೇಕು. ಕಷ್ಟಕಾಲದಲ್ಲಿ ರೈತರಿಗೆ ನೆರವಾಗುವಂತೆ ವರ್ತಕರು ಮತ್ತು ವ್ಯಾಪಾರಸ್ಥರಲ್ಲಿ ಜಿಲ್ಲಾಧಿಕಾರಿ ಮನವಿ ಮಾಡಿದರು.
ಇದನ್ನೂಓದಿ: ವಿಜಯಪುರದಲ್ಲಿ ಲಾಕ್‌ಡೌನ್ ಮತ್ತಷ್ಟು ಬಿಗಿ: ಸಚಿವೆ ಶಶಿಕಲಾ ಜೊಲ್ಲೆ
ಲಾಕ್ ಡೌನ್ ನೆಪ ಹೇಳಿಕೊಂಡು ರೈತರಿಗೆ ತೊಂದರೆ ಕೊಡುವುದನ್ನು ಸಹಿಸುವುದಿಲ್ಲ. ಯಾವುದೇ ರೀತಿಯ ಸಮಸ್ಯೆಗಳಿದ್ದಲ್ಲಿ ತಕ್ಷಣ ಅಪರ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ, ದೂರುಗಳಿದ್ದಲ್ಲಿ ನನಗೂ ಮೆಸೇಜ್ ಮೂಲಕ ಮಾಹಿತಿ ನೀಡಿ. ಕೃಷಿ, ತೋಟಗಾರಿಕೆ, ಎಪಿಎಂಸಿ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸುವಂತೆ ಡಿಸಿ ಸೂಚನೆ ನೀಡಿದರು.
ಅಗತ್ಯ ವಸ್ತುಗಳು ಮತ್ತು ರೈತರ ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಯಾವುದೇ ರೀತಿಯ ನಿರ್ಬಂಧವಿಲ್ಲ. ನಿಗದಿತ ಸಮಯ, ನಿಗದಿತ ದರಗಳಲ್ಲಿ ಅಗತ್ಯ ವಸ್ತುಗಳ ಮಾರಾಟ ಆಗಬೇಕು. ಮಾರುಕಟ್ಟೆಗೆ ಕೃಷಿ ಬೆಳೆ, ತೋಟಗಾರಿಕಾ ಬೆಳೆ , ಅಗತ್ಯ ವಸ್ತುಗಳ ಸರಬರಾಜುಗಳ ಸಂಪರ್ಕಕೊಂಡಿ ಕಡಿತವಾಗದಂತೆ ಮುನ್ನೆಚ್ಚರಿಕೆ ವಹಿಸಿ ವ್ಯಾಪಾರ-ವಹಿವಾಟು ನಡೆದು ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಅವರು ಸೂಚನೆ ನೀಡಿದರು.
ರೈತರಿಂದ ಗ್ರಾಹಕರವರೆಗೆ ಇರುವಂತಹ ಸಂಪರ್ಕ ಮತ್ತು ಮಾರುಕಟ್ಟೆಯಲ್ಲಿ ಇರುವಂತಹ ಬೆಲೆಗಳ ಬಗ್ಗೆ ಅಧಿಕಾರಿಗಳು ಸಂಪರ್ಕ ಸಾಧಿಸಿ ಪರಿಶೀಲನೆ ನಡೆಸಬೇಕು. ಎಪಿಎಂಸಿಯಲ್ಲಿ ಬರುವ ತರಕಾರಿ, ಹಣ್ಣುಗಳಿಗೆ ಯಾವುದೇ ರೀತಿಯ ನಿರ್ಬಂಧ ಇರದಂತೆ ನೋಡಿಕೊಳ್ಳಬೇಕು. ಬೆಳಗ್ಗೆ ತರಕಾರಿ ಮತ್ತು ಹಣ್ಣು ಹಂಪಲಗಳ ಮಾರಾಟಕ್ಕೆ ಅವಕಾಶವಿದ್ದು, ನಂತರ ತಳ್ಳುವ ಗಾಡಿಯ ಮೂಲಕ ಮಾರಾಟಕ್ಕೆ ಯಾವುದೇ ನಿರ್ಬಂಧ ಇಲ್ಲ, ಅದರಂತೆ ಹಾಪಕಾಮ್ಸ್ ವಾಹನಗಳನ್ನು ಮತ್ತು ಹಣ್ಣು-ಹಂಪಲಗಳ ಮಾರಾಟ ವ್ಯವಸ್ಥೆಯನ್ನು ಸದೃಢಗೊಳಿಸಿ ಮನೆಮನೆಗೆ ವಾಹನಗಳ ಮೂಲಕ ಮಾರಾಟಕ್ಕೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.