ವಿಜಯಪುರ :ಸ್ಥಳೀಯ ಮಹಾನಗರ ಪಾಲಿಕೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಜಿಲ್ಲಾ ಬಿಜೆಪಿ ಈಗ ಒಗ್ಗಟ್ಟಿನ ಮಂತ್ರ ಜಪಿಸುತ್ತಿದೆ. ಹಲವು ವರ್ಷಗಳಿಂದ ಮನೆಯೊಂದು ಮೂರು ಬಾಗಿಲು ಆಗಿರುವ ಜಿಲ್ಲಾ ಬಿಜೆಪಿ ಘಟಕ ಚುನಾವಣೆಯಲ್ಲಾದರೂ ಒಗ್ಗಟ್ಟು ಪ್ರದರ್ಶಿಸಬೇಕೆಂದು ನಿರ್ಧರಿಸಿದೆ. ಈ ಸಂಬಂಧ ಖಾಸಗಿ ಹೋಟೆಲ್ ನಲ್ಲಿ ಜಿಲ್ಲಾ ಬಿಜೆಪಿ ನಾಯಕರ ಸಭೆ ನಡೆದಿದೆ. ಸದ್ಯಕ್ಕೆ ಈ ಯತ್ನ ಫಲಪ್ರದವಾಗಿದೆ ಎನ್ನಲಾಗಿದೆ.
ಆದರೆ, ಚುನಾವಣೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸಲು ಇನ್ನೂ ಸಮಯ ಇರುವ ಕಾರಣ ಟಿಕೆಟ್ ಹಂಚಿಕೆಯಲ್ಲಿ ಸ್ವಲ್ಪ ಏರುಪೇರಾದರೂ ಮತ್ತೆ ಬಿಜೆಪಿ ಜಿಲ್ಲಾ ಘಟಕ ಮೂರು ಬಾಗಿಲಾದರೆ ಅಚ್ಚರಿ ಪಡಬೇಕಿಲ್ಲ.
ಒಂದೇ ವೇದಿಕೆಯಲ್ಲಿ ಗುರು ಶಿಷ್ಯರು: ವಿಜಯಪುರ ಜಿಲ್ಲಾ ಬಿಜೆಪಿಯಲ್ಲಿ ಹಲವು ವರ್ಷಗಳಿಂದ ಭಿನ್ನಮತ ಇರುವುದು ಗುಟ್ಟಾಗಿ ಉಳಿದಿಲ್ಲ. ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಮಾಜಿ ಶಾಸಕ ಅಪ್ಪಾಸಾಹೇಬ ಪಟ್ಟಣಶೆಟ್ಟಿಯ ರಾಜಕೀಯ ಭಿನ್ನಮತ ಬಿಜೆಪಿ ಜಿಲ್ಲಾಧ್ಯಕ್ಷರ ಕೈ ಕಟ್ಟಿ ಹಾಕಿದೆ. ಬಿಜೆಪಿಯಲ್ಲಿ ಹಾಲಿ ಶಾಸಕರ ಬಣ, ಮಾಜಿ ಶಾಸಕರ ಬಣ ಒಂದೆಡೆಯಾದರೆ, ಜಿಲ್ಲಾಧ್ಯಕ್ಷರು ಇವರ ನಡುವಿನ ಇನ್ನೊಂದು ಬಣವಾಗಿ ಉಳಿದುಕೊಂಡಿದ್ದಾರೆ. ಒಂದು ಕಾಲದಲ್ಲಿ ಗುರು ಶಿಷ್ಯರಾಗಿ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಹಾಲಿ ಹಾಗೂ ಮಾಜಿ ಶಾಸಕರು ಸದ್ಯ ತಮ್ಮದೇ ಬಣಗಳನ್ನು ಸೃಷ್ಟಿಸಿಕೊಂಡಿದ್ದಾರೆ.
ಇದೇ ಕಾರಣಕ್ಕೆ ಸ್ಥಳೀಯ ಮಹಾನಗರ ಪಾಲಿಕೆ ಚುನಾವಣೆ ಟಿಕೆಟ್ ಹಂಚಿಕೆ ಮಾಡುವುದು ಜಿಲ್ಲಾಧ್ಯಕ್ಷರಿಗೆ ತಲೆನೋವಾಗಿ ಪರಿಣಮಿಸಿದೆ. ಹಾಗಾಗಿ ರಾಜ್ಯ ಬಿಜೆಪಿ ಘಟಕ ಪಕ್ಷದ ಮುಖಂಡರೊಬ್ಬರಿಗೆ ಈ ಜವಾಬ್ದಾರಿ ಹೊರೆಸಿದೆ.
ಅರ್ಜಿ ಸಲ್ಲಿಕೆಯ ಗೊಂದಲ : ನಾಮಪತ್ರ ಸಲ್ಲಿಕೆ ಆರಂಭಗೊಳ್ಳುವ ಮುನ್ನ ಟಿಕೆಟ್ ಆಕಾಂಕ್ಷಿಗಳು ತಮ್ಮ ಅರ್ಜಿ ಸಲ್ಲಿಸಬೇಕಾಗಿತ್ತು. ಆಗ ಅವರ ಎದುರು ಮೂರು ಬಾಗಿಲು ತೆರೆದುಕೊಂಡ ಕಾರಣ ಯಾರಿಗೆ ಸಲ್ಲಿಸಿದರೆ ತಮಗೆ ಟಿಕೆಟ್ ದೊರೆಯಬಹುದು ಎನ್ನುವ ಗೊಂದಲ ಅವರಲ್ಲಿ ಉಂಟಾಗಿತ್ತು. ಗೌಡರ ಹಿಂಬಾಲಕರು ಗೌಡರಿಗೆ ಸಲ್ಲಿಸಿದ್ದರೆ, ಶೆಟ್ಟರ್ ಹಿಂಬಾಲಕರು ಶೆಟ್ಟರ್ ಅವರಿಗೆ, ಇನ್ನೂ ತಟಸ್ಥ ಇರುವ ಆಕಾಂಕ್ಷಿ ಅಭ್ಯರ್ಥಿಗಳು ಜಿಲ್ಲಾ ಘಟಕಕ್ಕೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಕುಳಿತರೂ ಪರಸ್ಪರ ಟೀಕಿಸಲಿಲ್ಲ: ಹಾಲಿ ಶಾಸಕರು ಹಾಗೂ ಮಾಜಿ ಶಾಸಕರು ನಿನ್ನೆ ನಡೆದ ಸಭೆಯಲ್ಲಿ ವೇದಿಕೆಯಲ್ಲಿದ್ದರೂ ಅವರ ಭಾಷಣದಲ್ಲಿ ನೇರವಾಗಿ ಯಾವುದೇ ಟೀಕೆ ಮಾಡಲಿಲ್ಲ. ಕೇವಲ ಜಿಲ್ಲಾ ಘಟಕ ಕರೆದ ಸಭೆಯ ಉದ್ದೇಶದ ಬಗ್ಗೆ ಮಾತನಾಡಿದರು ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ. ಈ ಸಭೆಯ ಮುಖ್ಯ ಉದ್ದೇಶ ಟಿಕೆಟ್ ಆಕಾಂಕ್ಷಿಗಳು ಹಾಗೂ ಪಕ್ಷದ ಕಾರ್ಯಕರ್ತರಿಗೆ ತಾವು ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಬಿಂಬಿಸುವ ಪ್ರಯತ್ನಎನ್ನಲಾಗಿದೆ. ಇನ್ನೂ ಅ. 17ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿರುವ ಕಾರಣ ಮುಂದೇನಾಗುತ್ತದೆ ಕಾದುನೋಡಬೇಕಿದೆ.
ಇದನ್ನೂ ಓದಿ :ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಆಪ್ತರಿಂದ ಹಲ್ಲೆ, ಜೀವ ಬೆದರಿಕೆ ಆರೋಪ