ವಿಜಯಪುರ:ಶಿವ ಸಂಸ್ಕೃತಿಗೆ ಮಾರು ಹೋಗಿ ಶ್ರೀಶೈಲಂ ಜಗದ್ಗುರು ಡಾ. ಚನ್ನ ಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರಿಂದ ಮುಸ್ಲಿಂ ಯುವಕನೊಬ್ಬ ಲಿಂಗ ದೀಕ್ಷೆ ಪಡೆದಿದ್ದಾನೆ.
ಮೊಹಮ್ಮದ್ ಮಸ್ತಾನ್ ಎಂಬ ಇಸ್ಲಾಂ ಯುವಕ ಲಿಂಗ ದೀಕ್ಷೆ ಪಡೆದು ಶ್ರೀಶೈಲ ಮಲ್ಲಿಕಾರ್ಜುನ ದೇವರ ದರ್ಶನ ಪಡೆದನು. ಮೂಲತಃ ವಿಜಯವಾಡ ನಿವಾಸಿಯಾದ ಮೊಹಮ್ಮದ್, ಮುಂಬೈನಲ್ಲಿ ಹರ್ಬಲ್ ಉದ್ಯಮ ನಡೆಸುತ್ತಿದ್ದಾನೆ. ಈತ ಮೊದಲಿನಿಂದಲೂ ಶಿವ ಸಂಸ್ಕೃತಿಯ ಬಗ್ಗೆ ವಿಶೇಷ ಶ್ರದ್ಧೆ ಹೊಂದಿದ್ದ. ಹಲವು ಬಾರಿ ಶ್ರೀಶೈಲಕ್ಕೆ ಬಂದು ಹೋಗಿದ್ದಾನೆ. ಆದರೆ ಈ ಹಿಂದೆ ಶ್ರೀಶೈಲ ಜಗದ್ಗುರುಗಳು ಧರ್ಮ ಪ್ರಚಾರದಲ್ಲಿ ನಿರತರಾಗಿದ್ದ ಕಾರಣ ಈತನಿಗೆ ಜಗದ್ಗುರುಗಳ ದರ್ಶನ ದೊರೆತಿರಲಿಲ್ಲ.
ಶಿವರಾತ್ರಿ ದಿನ ಜಗದ್ಗುರುಗಳು ಪೀಠದಲ್ಲಿರುತ್ತಾರೆ ಎಂದು ತಿಳಿದು ನಿನ್ನೆ ಶ್ರೀಶೈಲಕ್ಕೆ ಬಂದು ದರ್ಶನ ಪಡೆದು ಇಷ್ಟಲಿಂಗವನ್ನು ಪಡೆಯುವ ಬಯಕೆ ವ್ಯಕ್ತಪಡಿಸಿದ್ದಾನೆ. ದೀಕ್ಷೆಯ ನಂತರ ಪಾಲಿಸಬೇಕಾದ ನಿಯಮಗಳನ್ನು ಅನುಸರಿಸಲು ಮೊಹಮ್ಮದ್ ಮಾನಸಿಕವಾಗಿ ಸಿದ್ಧನಾಗಿರುವುದಾಗಿ ತಿಳಿಸಿದ ಮೇಲೆ ಜಗದ್ಗುರುಗಳು ಲಿಂಗ ದೀಕ್ಷೆ ನೀಡಿದ್ದಾರೆ.