ವಿಜಯಪುರ:2003ರಲ್ಲಿ ಸ್ಥಾಪನೆಯಾಗಿರುವ ಮಹಿಳಾ ವಿಶ್ವವಿದ್ಯಾನಿಲಯ ಮಹಿಳೆಯರು ಉತ್ತಮ ಶಿಕ್ಷಣ ಕಲಿತು ಸ್ವಾವಲಂಬಿಗಳಾಗಬೇಕು, ಶೈಕ್ಷಣಿಕವಾಗಿ ಸಾಧನೆ ಮಾಡಬೇಕು ಎಂಬ ಉದ್ದೇಶವನ್ನು ಹೊಂದಿದೆ. ಇಲ್ಲಿ ಸಾವಿರಾರು ವಿದ್ಯಾರ್ಥಿನಿಯರು ಅಭ್ಯಾಸ ಮಾಡುತ್ತಿದ್ದಾರೆ. ಆದರೆ ವಿದ್ಯಾರ್ಥಿನಿಯರ ಅನುಕೂಲಕ್ಕೆ ವಿವಿಯಲ್ಲಿ 6 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ವಸ್ತು ಸಂಗ್ರಹಾಲಯ ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ರಾಜ್ಯದ ಎಲ್ಲ ಜಿಲ್ಲೆಗಳ ಕಲೆ, ಸಾಹಿತ್ಯ ಜನಪದ ಸೇರಿದಂತೆ ಇತರ ವಸ್ತುಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.
ವಿಜಯಪುರ ನಗರದ ಹೊರ ಭಾಗದಲ್ಲಿರುವ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯಕ್ಕೆ ಇದೀಗ 20 ವರ್ಷ. ಇನ್ನು ಶೈಕ್ಷಣಿಕ ಚಟುವಟಿಕೆಗಳ ಸಹಿತ ಇತರ ಪಠ್ಯೇತರ ಚಟುವಟಿಕೆಗಳನ್ನು ಮಾಡುವಲ್ಲಿ ಮಹಿಳಾ ವಿವಿ ಹೆಸರು ಮುಂಚೂಣಿಯಲ್ಲಿದೆ. ಈ ದಿಸೆಯಲ್ಲಿ ರಾಜ್ಯದ ಇತರ ಜಿಲ್ಲೆಗಳ ಪದ್ದತಿ, ಕಲೆ, ಸಂಸ್ಕೃತಿ, ಜಾನಪದ ಸೇರಿದಂತೆ ಇತರ ವಿಷಯಗಳು ಎಲ್ಲವನ್ನು ತಿಳಿಸುವ ನಿಟ್ಟಿನಲ್ಲಿ ವಸ್ತು ಸಂಗ್ರಹಾಲಯ ನಿರ್ಮಾಣ ಮಾಡಲಾಗಿದೆ.
7 ವರ್ಷಗಳಾದರೂ ಉದ್ಘಾಟನೆ ಭಾಗ್ಯ ಕಾಣದ ಮ್ಯೂಸಿಯಂ:ಕಳೆದ 7 ವರ್ಷಗಳ ಹಿಂದೆ ಅಂದಿನ ಕುಲಪತಿ ಮೀನಾ ಚಂದಾವಕರ ನೇತೃತ್ವದಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ವಸ್ತು ಸಂಗ್ರಹಾಲಯವನ್ನು ನಿರ್ಮಾಣ ಮಾಡಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳ ವಿವಿಧ ಕಲೆ, ವಸ್ತುಗಳು, ವಿವಿಧ ಪರಿಕರಗಳು, ಉಡುಪುಗಳು, ಸಂಪ್ರದಾಯ ಬಿಂಬಿಸುವ ವಸ್ತುಗಳು, ಕೃಷಿ, ಗೃಹ ಬಳಕೆ ಸೇರಿದಂತೆ ಇತರ ತರಹೇವಾರಿ ವಸ್ತುಗಳನ್ನು ಮಹಿಳಾ ವಿವಿಯ ಮ್ಯೂಸಿಯಂನಲ್ಲಿ ಇರಿಸಲಾಗಿದೆ. ಆದರೆ 7 ವರ್ಷಗಳಾದರೂ ವಸ್ತು ಸಂಗ್ರಹಾಲಯ ಮಾತ್ರ ಉದ್ಘಾಟನೆಯಾಗಿಲ್ಲ. ಇದು ಇಲ್ಲಿನ ವಿದ್ಯಾರ್ಥಿನಿಯರಿಗೆ ನಿರಾಸೆ ಮೂಡಿಸಿದೆ.