ವಿಜಯಪುರ: ಸಬಲಾ ಎಂಬ ಸಂಸ್ಥೆಯ ಮೂಲಕ ಮಲ್ಲಮ್ಮ ಯಾಳವಾರ ಎಂಬುವವರು ನೂರಾರು ಮಹಿಳೆಯರಿಗೆ ಉದ್ಯೋಗ ನೀಡುವ ಕಾಯಕದಲ್ಲಿ ತೊಡಗಿದ್ದಾರೆ. ನಗರದ ಹೊರವಲಯದಲ್ಲಿ ಸಬಲಾ ಹ್ಯಾಂಡಿಕ್ರಾಫ್ಟ್ ಸೇರಿದಂತೆ ಹತ್ತು ಹಲವು ಉದ್ಯೋಗ ಸೃಷ್ಟಿ ಮಾಡಿ ಬಡಮಹಿಳೆಯರಿಗೆ ಮಹಾತಾಯಿಯಾಗಿದ್ದಾರೆ.
35 ವರ್ಷದ ಹಿಂದೆ ಆರಂಭಿಸಿದ್ದ ಸಬಲಾ ಕೇಂದ್ರ ಈಗ ನೂರಾರು ಮಹಿಳೆಯರಿಗೆ ದಾರಿದೀಪವಾಗಿದೆ. ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಯಲ್ಲಮ್ಮ ಯಾಳವಾರ ಅವರೊಂದಿಗೆ ಈಟಿವಿ ಭಾರತ ವಿಶೇಷ ಸಂದರ್ಶನ ನಡೆಸಿದ್ದು, ಇಲ್ಲಿ ಅವರು ತಾವು ನಡೆದು ಬಂದ ದಾರಿ ಮತ್ತು ಎದುರಿಸಿದ ಸವಾಲುಗಳನ್ನು ವಿವರಿಸಿದರು.
ಮಹಿಳೆಯರು ಬಳಸುವ ಎಲ್ಲ ಕರಕುಶಲ ವಸ್ತುಗಳನ್ನು ಈ ಸಂಸ್ಥೆಯಲ್ಲಿ ತಯಾರಿಸಿ ದೇಶ ವಿದೇಶಗಳಲ್ಲಿ ಮಾರಾಟ ಮಾಡುವ ದಾರಿಯನ್ನು ಯಲ್ಲಮ್ಮ ಕಂಡುಕೊಂಡಿದ್ದಾರೆ. ಸುಮಾರು 600ಕ್ಕೂ ಹೆಚ್ಚು ಮಹಿಳೆಯರು ಅಲಂಕೃತ ಹ್ಯಾಂಡಿಕ್ರಾಪ್ಟ್ ತಯಾರಿಸಿ ಅವುಗಳು ವಸ್ತುಪ್ರದರ್ಶನ ಮತ್ತು ಹೋಲ್ಸೇಲ್ ಮಾರಾಟ ಮಾಡುತ್ತಿದ್ದಾರೆ. ದುಡ್ಡು ಉಳಿತಾಯಕ್ಕಾಗಿ ಬ್ಯಾಂಕ್ ಸಹ ತೆರೆದಿದ್ದಾರೆ. ಈ ಬ್ಯಾಂಕ್ನಲ್ಲಿ ಸಾವಿರಾರು ಮಹಿಳೆಯರು, ಪುರುಷರು ಠೇವಣಿ ಇಡುವಂತೆ ಮಾಡಿದ್ದಾರೆ. ಪ್ರತಿ ವರ್ಷ 150 ಕೋಟಿ ರೂ. ವ್ಯವಹಾರ ನಡೆಸುತ್ತಿದ್ದಾರೆ.
ಕೆಲಸ ಕೇಳಿಕೊಂಡು ಬರುವ ಮಹಿಳೆಯರಿಗೆ ಕರಕುಶಲ ತಜ್ಞರಿಂದ ತರಬೇತಿ ಕೊಡಿಸಿ, ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುತ್ತಿದ್ದಾರೆ. ಮಹಿಳೆಯರು ಅಲಂಕಾರಿಕವಾಗಿ ಬಳಸುವ ವಸ್ತು, ಸೀರೆ, ಆಭರಣ ಸೇರಿದಂತೆ 1000ಕ್ಕೂ ಹೆಚ್ಚು ಕರಕುಶಲ ವಸ್ತುಗಳನ್ನು ತಯಾರಿಸುತ್ತಾರೆ. ಅಲ್ಲದೇ ಈ ವಸ್ತುಗಳಿಗೆ ಮಾರುಕಟ್ಟೆ ವ್ಯವಸ್ಥೆಯನ್ನು ಸಹ ಮಾಡಿದ್ದಾರೆ.