ವಿಜಯಪುರ:ವಿದ್ಯಾಗಮ ಯೋಜನೆಯಿಂದ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಕೊರೊನಾ ಸೋಂಕು ಹರಡಿರುವುದು ಶಾಲೆ ಆರಂಭಕ್ಕೆ ಮತ್ತೆ ಹಿನ್ನೆಡೆಯಾಗಿದೆ. ಇದರ ನಡುವೆಯೂ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಶಾಲೆ ಆರಂಭಿಸಲೇ ಬೇಕೆಂದಾಗ ಪಾಳೆ ಪದ್ಧತಿ (ಶಿಫ್ಟ್ ಪದ್ಧತಿ) ಜಾರಿಗೆ ತರಬೇಕು ಎನ್ನುವ ಅಭಿಪ್ರಾಯ ಶಿಕ್ಷಕ ವಲಯದಿಂದ ಕೇಳಿ ಬಂದಿದೆ.
ಪಾಳೆ ಪದ್ದತಿಗೆ ಒಲವು ತೋರಿದ ವಿಜಯಪುರ ಶಿಕ್ಷಕರು.. ಕೊರೊನಾ ವೈರಸ್ ನಿಂದ ಶಿಕ್ಷಣ ವಲಯಕ್ಕೆ ಭಾರಿ ಹಿನ್ನೆಡೆಯಾಗಿದ್ದು, ಎಲ್ಲಾ ಸರಿ ಇದ್ದರೆ, ಇಷ್ಟೊತ್ತಿಗೆ ಮಕ್ಕಳಿಗೆ ಅಕ್ಟೋಬರ್ ರಜೆ ಬಂದಿರುತ್ತಿತ್ತು. ಆದರೆ, ಕೊರೊನಾ ಇದೆಲ್ಲವನ್ನು ಕಸಿದುಕೊಂಡಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದು ಎಂದು ಆನ್ ಲೈನ್ ಕ್ಲಾಸ್ ಆರಂಭಿಸಲಾಗಿತ್ತು. ಬಡಮಕ್ಕಳ ಶಿಕ್ಷಣಕ್ಕೆ ವಿದ್ಯಾಗಮ ಯೋಜನೆ ಜಾರಿಗೊಳಿಸಲಾಗಿತ್ತು.
ಆದರೆ, ಕೆಲವು ಕಡೆ ಮನೆ - ಮಠದ ಆವರಣದಲ್ಲಿ ನಡೆಸಿದ್ದ ಪಾಠದಿಂದ ವಿದ್ಯಾರ್ಥಿ, ಶಿಕ್ಷಕರಿಗೆ ಕೊರೊನಾ ಹರಡಿರುವುದು ತರಾತುರಿ ಶಿಕ್ಷಣ ವ್ಯವಸ್ಥೆಯನ್ನು ಪ್ರಶ್ನಿಸುವಂತಾಗಿದೆ. ಇಂಥ ಸಮಯದಲ್ಲಿ ಶಾಲೆ ಆರಂಭಿಸುವುದು ಹೇಗೆ ಎನ್ನುವುದು ಸರ್ಕಾರದ ಮುಂದಿರುವ ಯಕ್ಷ ಪ್ರಶ್ನೆಯಾಗಿದೆ. ಇದಕ್ಕೆ ಶಿಕ್ಷಕರೇ ಹೊಸ ಮಾರ್ಗ ಸೂಚಿಸಿದ್ದಾರೆ. ಇದಕ್ಕೆ ಹಲವು ಶಿಕ್ಷಕರು ಧ್ವನಿಗೂಡಿಸಿದ್ದಾರೆ.
ನಮ್ಮ ಜಿಲ್ಲೆಯಲ್ಲಿ ವಿದ್ಯಾಗಮ ಶಿಕ್ಷಣಕ್ಕೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಪಾಳೆ ಪದ್ದತಿ ಪ್ರಕಾರ ಪಾಠ ಬೋಧನೆ ಮಾಡಿದರೆ, ಕೊರೊನಾ ನಿಯಂತ್ರಿಸಬಹುದು. ನಮಗೂ ಮಕ್ಕಳನ್ನು ಬಿಟ್ಟು ಇರಲು ಆಗುವುದಿಲ್ಲ. ನಮ್ಮ ವೃತ್ತಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವುದಾಗಿದೆ. ಕೊರೊನಾ ಮಾರ್ಗಸೂಚಿ ಅನುಸರಿಸಿ ಪಾಠ ಮಾಡಲು ಸಿದ್ದರಿದ್ದೇವೆ ಎನ್ನುವ ಅಭಿಪ್ರಾಯ ವಿಜಯಪುರ ಜಿಲ್ಲೆಯ ಶಿಕ್ಷಕರದ್ದಾಗಿದೆ.