ವಿಜಯಪುರ:ಜ್ಞಾನಯೋಗಿ, ನಡೆದಾಡುವ ದೇವರೆಂದೇ ಖ್ಯಾತರಾದ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಮಹಾಸ್ವಾಮಿಗಳು (81) ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸ್ವಾಮೀಜಿಯವರಿಗೆ ಜ್ಞಾನಯೋಗಾಶ್ರಮದಲ್ಲಿಯೇ ಕಳೆದ ಕೆಲ ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು.
ಸೋಮವಾರ ಸಂಜೆ 6.05 ನಿಮಿಷಕ್ಕೆ ಸ್ವಾಮೀಜಿಯವರು ಕೊನೆಯುಸಿರೆಳೆದಿದ್ದಾರೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಜನಿಸಿದ್ದ ಸಿದ್ದೇಶ್ವರ ಮಹಾಸ್ವಾಮೀಜಿಗಳುಎರಡನೇ ವಿವೇಕಾನಂದ ಎನಿಸಿಕೊಂಡಿದ್ದರು.
ಭಕ್ತರಿಗೆ ಅಂತಿಮ ದರ್ಶನ ಮಾಡಿಸಿದ ಬಳಿಕ ನಾಳೆ ಸ್ವಾಮೀಜಿಯವರ ಅಂತ್ಯಕ್ರಿಯೆ ನಡೆಯಲಿದೆ ಎಂದು ವಿಜಯಪುರದ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜ್ಞಾನಯೋಗಾಶ್ರಮಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ..ಕಳೆದ ಎರಡ್ಮೂರು ದಿನಗಳಿಂದ ಸಿದ್ದೇಶ್ವರ ಶ್ರೀಗಳ ಆರೋಗ್ಯದಲ್ಲಿ ಏರುಪೇರು ಉಂಟಾದ ಗಣ್ಯರು, ನಾಡಿನ ಸ್ವಾಮೀಜಿಗಳು ಮತ್ತು ರಾಜಕಾರಣಿಗಳು ಯೋಗಾಶ್ರಮಕ್ಕೆ ಭೇಟಿ ನೀಡಿದ ಶ್ರೀಗಳ ಆರೋಗ್ಯದ ಬಗ್ಗೆ ವಿಚಾರಿಸಿದ್ದರು. ಸೋಮವಾರ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಶ್ರೀಗಳನ್ನು ಭೇಟಿಯಾಗಿ ದರ್ಶನ ಪಡೆದಿದ್ದರು. ಶೀಘ್ರ ಚೇತರಿಕೆ ಆಗಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದ್ದರು.
ಭಾನುವಾರ ನಿರ್ಮಲಾನಂದ ಸ್ವಾಮೀಜಿ, ಬಿ ವೈ ವಿಜಯೇಂದ್ರ ಭೇಟಿ..ಕಳೆದ ಭಾನುವಾರದಂದು ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ, ಅಥಣಿ ಶಾಸಕ ಮಹೇಶ ಕುಮಟಳ್ಳಿ ಅವರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯವನ್ನು ವಿಚಾರಿಸಿದ್ದರು.
ಸಿಎಂ ಸಂತಾಪ: 'ವಿಜಯಪುರದ ಜ್ಞಾನ ಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಲಿಂಗೈಕ್ಯರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ತಮ್ಮ ಪ್ರವಚನಗಳ ಮೂಲಕ ಮನುಕುಲದ ಉದ್ಧಾರಕ್ಕೆ ಶ್ರಮಿಸಿದ ಶ್ರೀಗಳ ಸೇವೆ ಅಮೋಘ ಹಾಗೂ ಅನನ್ಯವಾದುದು. ಶ್ರೀಗಳ ಅಗಲಿಕೆ ನಾಡಿಗೆ ತುಂಬಲಾರದ ನಷ್ಟವಾಗಿದೆ. ಶ್ರೀಗಳ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. ನಾಡಿನಾದ್ಯಂತ ಇರುವ ಶ್ರೀಗಳ ಭಕ್ತ ಸಮೂಹಕ್ಕೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿನ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಸಿದ್ದೇಶ್ವರ ಶ್ರೀಗಳಿಗೆ ಅನಾರೋಗ್ಯ: ಪಿಎಂ ಮೋದಿ, ಸಿಎಂ ಬೊಮ್ಮಾಯಿ, ಸಚಿವ ಜೋಶಿಯಿಂದ ಶ್ರೀಗಳ ಆರೋಗ್ಯ ವಿಚಾರಣೆ