ವಿಜಯಪುರ: ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ವಯೋಸಹಜ ಅನಾರೋಗ್ಯದ ಕಾರಣದಿಂದ ನಿನ್ನೆ ಸಂಜೆ ದೈವಾಧೀನರಾಗಿದ್ದಾರೆ. ಪ್ರಸಿದ್ಧ ಜ್ಞಾನಯೋಗಿಯು ತಮ್ಮ ಅರ್ಥಪೂರ್ಣ, ಸರಳ ಪ್ರವಚನದ ಮೂಲಕ ಭಕ್ತರಿಗೆ ಜ್ಞಾನ ದೀವಿಗೆಯಾಗಿದ್ದರು. ಶ್ರೀಗಳು ಅಭಿವಂದನ ಪತ್ರವನ್ನು ಬರೆದು ಬದುಕಿನ ಸಂದೇಶವನ್ನು ಸಾರಿದ್ದು, ತಮ್ಮ ಅಂತಿಮ ವಿಧಿವಿಧಾನಗಳ ಬಗ್ಗೆಯೂ ತಿಳಿಸಿ ಹೋಗಿದ್ದಾರೆ.
ನುಡಿದಂತೆ ನಡೆದು, ನಡೆದಂತೆ ನುಡಿದ ನಿಜಸಂತ 2014ರ ಗುರುಪೂರ್ಣಿಮೆ ದಿನ ತಮ್ಮ ಅಂತಿಮ ಅಭಿವಂದನ ಪತ್ರ ರಚಿಸಿದ್ದರು. ಈ ಪತ್ರಕ್ಕೆ ನ್ಯಾಯಾಧೀಶರು ಸಹಿ ಹಾಕಿದ್ದಾರೆ. ನಿನ್ನೆ ವೈಕುಂಠ ಏಕಾದಶಿ ದಿನವಾಗಿದ್ದು ಸ್ವರ್ಗದ ಎಲ್ಲ ಬಾಗಿಲುಗಳು ತೆರೆದಿರುತ್ತವೆ ಎಂದು ಹಿಂದೂ ಪೌರಾಣಿಕ ನಂಬಿಕೆ. ಸಿದ್ದೇಶ್ವರ ಶ್ರೀಗಳು ಇಂಥ ವಿಶೇಷ ದಿನದಂದೇ ಇಹಲೋಕ ತ್ಯಜಿಸಿದ್ದಾರೆ. ಇವರುಅಂತಿಮ ಅಭಿವಂದನ ಪತ್ರದ ಸಾಲುಗಳು ಹೀಗಿವೆ..
ಬದುಕು ಅನುಭವಗಳ ಪ್ರವಾಹ. ಅದರ ಸಿರಿವಂತಿಕೆಯು ವಿಶ್ವ-ಚಿಂತನೆ ಹಾಗೂ ಸತ್ಯ ಸಂಶೋಧನೆಗಳಿಂದ. ಅದರ ಸೌಂದರ್ಯವು ರಾಗದ್ವೇಷರಹಿತವಾದ ಹಾಗೂ ಅಸೀಮಿತವಾದ ಸದ್ಭಾವದಿಂದ. ಅದನ್ನು ಸುಭಗ ಹಾಗೂ ಸಮೃದ್ಧಗೊಳಿಸುವುದೇ 'ಸಾಧನೆ'. ಅಂಥ ಜೀವನದ ಉಪಯುಕ್ತ ಅನುಭವಗಳನ್ನು ಆಸಕ್ತರೊಂದಿಗೆ ಹಂಚಿಕೊಳ್ಳುವುದೇ 'ಧರ್ಮ'. ಅದು ಸ್ವ-ಪರ ನೆಮ್ಮದಿಗೆ ಕಾರಣ.
ನನ್ನದು ಆವೇಗವಿಲ್ಲದ ಸಾವಧಾನದ ಸಾಮಾನ್ಯ ಬದುಕು. ಅದನ್ನು ರೂಪಿಸಿದವರು 'ಗುರುದೇವರು'. ಅದನ್ನು ಹದುಳಿಸಿದವರು ನಾಡಿನ ಪೂಜ್ಯರು, ಹಿತೈಷಿಗಳು, ಸ-ಹೃದಯರು, ಸಾಧಕರು ಹಾಗೂ ಶ್ರೀ ಸಾಮಾನ್ಯರು. ನಿಸರ್ಗವು ಮೈ ಮನಸ್ಸುಗಳಿಗೆ ತಂಪನಿತ್ತಿದೆ. ತಾತ್ತ್ವಿಕ ಚಿಂತನೆಗಳು ತಿಳಿಬೆಳಗ ಹರಡಿವೆ. ಜಾಗತಿಕ ತತ್ತ್ವಜ್ಞಾನಿಗಳ ಮತ್ತು ವಿಜ್ಞಾನಿಗಳ ಶೋಧನೆಗಳು ದೃಷ್ಟಿಯ ಪರಿಸೀಮೆಯನ್ನು ದೂರ ದೂರ ಸರಿಸಿವೆ.
ನಾನು ಎಲ್ಲದಕ್ಕೂ 'ಉಪಕೃತ'. ಬದುಕು ಮುಗಿಯುತ್ತದೆ; ದೀಪ ಆರಿದಂತೆ; ತೆರೆ ಅಡಗಿದಂತೆ; ಮೇಘ ಕರಗಿದಂತೆ. ಉಳಿಯುವುದು ಬರಿ ಬಯಲು. ಮಹಾಮೌನ. ಶೂನ್ಯಸತ್ಯ! ಹಲವು ದಶಕಗಳ ಕಾಲ ಈ ಅದ್ಭುತ ಜಗತ್ತಿನಲ್ಲಿ ಬಾಳಿದ್ದೇನೆ; ನೋಡಿ ತಿಳಿದು ಅನುಭವಿಸಿದ್ದೇನೆ. ನನ್ನ ಬದುಕು ಕೊನೆಗೊಳ್ಳುವ ಮುಂಚೆ ಅದನ್ನು ಕೃತಜ್ಞತೆಯಿಂದ ಸ್ಮರಿಸಬೇಕು; ಅದಕ್ಕಾಗಿ ಈ 'ಅಂತಿಮ ಅಭಿವಾದನ-ಪತ್ರ'!