ವಿಜಯಪುರ: ಎಲ್ಲಿ ನೋಡಿದ್ರೂ ತರಹೇವಾರಿ ತಿಂಡಿ ತಿನಿಸು. ಶಾಲಾ ಮಕ್ಕಳ ವಿವಿಧ ಖಾದ್ಯಗಳ ಅಂಗಡಿ. ಭರ್ಜರಿ ವ್ಯಾಪಾರ ನಡೆಸಿ, ಕಿಸೆ(ಪಾಕೆಟ್) ತುಂಬಿಸಿಕೊಂಡು ಖುಷ್ ಆದ ವಿದ್ಯಾರ್ಥಿಗಳು. ಅಂದಹಾಗೇ ಮಕ್ಕಳೇ ತಯಾರಿಸಿದ ಖಾದ್ಯಗಳ ಮಾರಾಟಕ್ಕೆ ವೇದಿಕೆ ಒದಗಿಸಿದ್ದು ಫುಡ್ ಫೆಸ್ಟ್. ಇದು ನಡೆದಿದ್ದು ಗುಮ್ಮಟನಗರಿ ವಿಜಯಪುರ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಛತ್ರಪತಿ ಶಿವಾಜಿ ಮಹಾರಾಜ ಎಜ್ಯುಕೇಷನ್ ಸೊಸೈಟಿಯ ಶ್ರೀ ರವೀಂದ್ರನಾಥ ಠಾಗೋರ್ ಶಾಲೆಯ ಫುಡ್ ಫೆಸ್ಟ್ನಲ್ಲಿ.
ವಿದ್ಯಾರ್ಥಿಗಳೇ ತಯಾರಿಸಿದ ಆಹಾರ.. ಈ ಫುಡ್ ಫೆಸ್ಟ್ನಲ್ಲಿ ವಿದ್ಯಾರ್ಥಿಗಳೇ ವಿವಿಧ ಆಹಾರ ಖಾದ್ಯಗಳನ್ನು ತಯಾರಿಸಿ ಮಾರಾಟ ಮಾಡಿ ಸಂತಸ ಪಟ್ಟರು. ಮಕ್ಕಳು ಸಮೋಸಾ, ಬಜ್ಜಿ, ವೆಜ್ ಬಿರಿಯಾನಿ, ಮಸಾಲಾ ರೈಸ್, ಚುರುಮುರಿ, ಅವಲಕ್ಕಿ ಒಗ್ಗರಣೆ, ಕ್ಯಾರೆಟ್ ಹಲ್ವಾ, ಚಕ್ಕುಲಿ, ರವೆ ಉಂಡೆ ಸೇರಿದಂತೆ ಬಾಯಲ್ಲಿ ನೀರೂರಿಸುವ ಖಾದ್ಯಗಳನ್ನು ತಾವೇ ತಯಾರಿಸಿದರು. ಬಗೆಬಗೆಯ ತಿನಿಸುಗಳನ್ನು ಪಕ್ಕಾ ವೃತ್ತಿಪರ ವರ್ತಕರಂತೆ ಮಾರಾಟ ಮಾಡಿ ಲಾಭಗಳಿಸಿ ಸಂಭ್ರಮಿಸಿದರು.
ಮಕ್ಕಳಲ್ಲಿ ವ್ಯಾಪಾರ ವಹಿವಾಟು, ಲಾಭ ಕುರಿತು ಅರಿವು ಮೂಡಿಸಲು ಶಾಲಾ ಆಡಳಿತ ಮಂಡಳಿಯು ಇಂಥದ್ದೊಂದು ವಿಶಿಷ್ಟ ಕಾರ್ಯಕ್ರಮ ರೂಪಿಸಿತ್ತು. ಅದರಂತೆ ಮಕ್ಕಳು ಪೋಷಕರ ನೆರವಿನಿಂದ ವಿಭಿನ್ನ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸಿ ಶಾಲಾ ಆವರಣದಲ್ಲಿ ತಾತ್ಕಾಲಿಕವಾಗಿ ತೆರೆದಿದ್ದ ಮಳಿಗೆಗಳಲ್ಲಿ ತಿನಿಸುಗಳನ್ನು ಮಾರಾಟ ಮಾಡಿದರಲ್ಲದೇ ಖರ್ಚು ವೆಚ್ಚ ಹಾಗೂ ತಾವುಗಳಿಸಿದ ಲಾಭಾಂಶ ಕುರಿತು ಶಿಕ್ಷಕರಿಗೆ ವರದಿ ನೀಡಿದರು.
80ಕ್ಕೂ ಹೆಚ್ಚು ಮಳಿಗೆ.. ಶಾಲೆಯ ಆವರಣದಲ್ಲಿ 80ಕ್ಕೂ ಹೆಚ್ಚು ಮಳಿಗೆಗಳಲ್ಲಿ ಪ್ರತಿ ನಾಲ್ವರು ವಿದ್ಯಾರ್ಥಿಗಳು ವ್ಯಾಪಾರ ವಹಿವಾಟು ನಡೆಸಿದರು. ಪಕ್ಕಾ ಹೊಟೆಲ್ ಸ್ಟೈಲ್ನಲ್ಲಿ ಹಾಗೂ ಬೀದಿ ಬದಿಯ ಚಾಟ್ಸ್ ಅಂಗಡಿಗಳಲ್ಲಿ ಅದ್ಯಾವ ರೀತಿ ವ್ಯವಹರಿಸುತ್ತಾರೋ ಅದೇ ರೀತಿ ವ್ಯಾಪಾರ ಮಾಡಿದರು. ಸಂಜೆ 4ಕ್ಕೆ ಆರಂಭಗೊಂಡ ಆಹಾರ ಮೇಳ ಸಂಜೆ ಮುಕ್ತಾಯವಾಯಿತು. ಪೋಷಕರು, ಅವರ ಸಂಬಂಧಿಕರು, ಶಿಕ್ಷಕರು ಅಲ್ಲದೇ ಸಾರ್ವಜನಿಕರೂ ಕೂಡ ತಿನಿಸುಗಳನ್ನು ಖರೀದಿಸಿ ಸವಿದರು.