ವಿಜಯಪುರ: ಕೇಂದ್ರ ಪುರಸ್ಕ್ರತ ಅಮೃತ ಯೋಜನೆಯಡಿ ನಗರದಲ್ಲಿ ಜಾರಿ ಇರುವ ಕುಡಿಯುವ ನೀರು ಸರಬರಾಜು ಯೋಜನೆಯನ್ನ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಎಲ್ಲ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಮೃತ್ ಯೋಜನೆಯಡಿ ಸಾಧಿಸಿದ ಪ್ರಗತಿ ಕುರಿತು ಪರಿಶೀಲನಾ ಸಭೆ ನಡೆಸಿದ ಅವರು, 177 ಕೋಟಿ ರೂ. ವೆಚ್ಚದ ಈ ಯೋಜನೆಯಡಿ ಈವರೆಗೆ 6 ವಲಯಗಳಲ್ಲಿ ಮಾತ್ರ ಶೇ.100 ರಷ್ಟು ಪ್ರಗತಿ ಸಾಧಿಸಿದ್ದು, ಇನ್ನುಳಿದ ವಲಯಗಳಲ್ಲಿ ಆರ್ಥಿಕ ಗುರಿಗೆ ತಕ್ಕಂತೆ ಭೌತಿಕ ಸಾಧನೆ ಮಾಡದೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಯೋಜನೆಯಡಿ 53,453 ಕುಡಿಯುವ ನೀರಿನ ಸಂಪರ್ಕ ನಳಗಳನ್ನು ಜೋಡಿಸುವ ಗುರಿ ಇದ್ದು, ಆರ್ಥಿಕ ಸಾಧನೆಗೆ ತಕ್ಕಂತೆ ಭೌತಿಕ ಪ್ರಗತಿ ಸಾಧಿಸಿಲ್ಲ. ಅಧಿಕಾರಿಗಳು ಯಾವುದೇ ರೀತಿಯ ಕಾರಣ ನೀಡದೇ ಮುಂದಿನ ಅಕ್ಟೋಬರ್ ಅಂತ್ಯದೊಳಗೆ ಯೋಜನೆ ಪೂರ್ಣಗೊಳಿಸಿ ನಾಗರಿಕರಿಗೆ ನೆರವಾಗುವಂತೆ ಕಟ್ಟುನಿಟ್ಟಿನ ಸೂಚನೆ ಕೊಟ್ಟರು.