ವಿಜಯಪುರ:ರಾಜ್ಯ ಸರ್ಕಾರದ ನಿರ್ದೇಶನದನ್ವಯ ಜಿಲ್ಲಾಡಳಿತ, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಬರುವ ಫೆ. 28 ಹಾಗೂ 29ರಂದು ಎರಡು ದಿನಗಳ ಕಾಲ ಬೃಹತ್ ಉದ್ಯೋಗ ಮೇಳಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಜಯಪುರದಲ್ಲಿ ಬೃಹತ್ ಉದ್ಯೋಗಮೇಳಕ್ಕೆ ಸಕಲ ಸಿದ್ಧತೆ - ವಿಜಯಪುರ ಉದ್ಯೋಗ ಮೇಳ
ರಾಜ್ಯ ಸರ್ಕಾರದ ನಿರ್ದೇಶನದನ್ವಯ ಜಿಲ್ಲಾಡಳಿತ, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಬರುವ ಫೆ. 28 ಹಾಗೂ 29ರಂದು ಎರಡು ದಿನಗಳ ಕಾಲ ಬೃಹತ್ ಉದ್ಯೋಗ ಮೇಳಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಉದ್ಯೋಗ ಮೇಳ ಕುರಿತ ಪೂರ್ವಭಾವಿ ಸಿದ್ಧತಾ ಸಭೆ ನಡೆಸಿ ಸೂಚನೆ ನೀಡಿದರು. ಸೊಲ್ಲಾಪುರ ರಸ್ತೆಯ ಬಿಎಲ್‍ಡಿಇ ಕಾಲೇಜ್ ಹತ್ತಿರ ಇರುವ ಸರ್ಕಾರಿ ಐಟಿಐ ಕಾಲೇಜು ಆವರಣದಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು, ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಉದ್ಯೋಗ ಮೇಳವನ್ನು ಯಶಸ್ವಿಗೊಳಿಸಬೇಕು. ಉದ್ಯೋಗ ಮೇಳದಲ್ಲಿ ಸುಮಾರು 5 ಸಾವಿರಕ್ಕಿಂತ ಹೆಚ್ಚು ಉದ್ಯೋಗಾಕಾಂಕ್ಷಿಗಳು ಆಗಮಿಸುವ ನಿರೀಕ್ಷೆ ಇದ್ದು, ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸೂಚನೆ ನೀಡಿದರು.
ಉದ್ಯೋಗ ಮೇಳಕ್ಕಾಗಿ ವ್ಯವಸ್ಥಾಪಕ ಸಮಿತಿ, ಪ್ರಚಾರ ಮತ್ತು ಪ್ರಕಟಣಾ ಉಪ ಸಮಿತಿ, ಆಹಾರ, ವಸತಿ ಉಪ ಸಮಿತಿ, ನೋಂದಣಿ ಮತ್ತು ಮಾರ್ಗದರ್ಶನ ಸಮಿತಿ, ಉದ್ಯೋಗದಾತ ಮತ್ತು ಉದ್ಯೋಗಾಕಾಂಕ್ಷಿಗಳ ಸಂಪರ್ಕ ಸಮಿತಿ, ಸ್ಟಾಲ್‍ಗಳ ವಿತರಣಾ ಮತ್ತು ನಿರ್ವಹಣಾ ಸಮಿತಿ ಸೇರಿದಂತೆ ಇನ್ನಿತರ ಸಮಿತಿಗಳ ಅಧಿಕಾರಿಗಳು ಮುಂಬರುವ ಈ ಬೃಹತ್ ಉದ್ಯೋಗಮೇಳ ಯಶಸ್ವಿಗೆ ಕಾರ್ಯನಿರ್ವಹಿಸುವಂತೆ ಸೂಚಿಸಿದರು. ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಉದ್ಯೋಗಮೇಳದಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕು. ಉದ್ಯೋಗಾಕಾಂಕ್ಷಿಗಳಿಗೆ ಮತ್ತು ಉದ್ಯೋಗದಾತರಿಗೆ ಅವಶ್ಯಕ ಸೌಲಭ್ಯಗಳನ್ನು ಈ ಸಂದರ್ಭದಲ್ಲಿ ಕಲ್ಪಿಸುವಂತೆ ಡಿಸಿ ಸೂಚನೆ ನೀಡಿದರು.