ಮುದ್ದೇಬಿಹಾಳ (ವಿಜಯಪುರ): ಕೊರೊನಾ ವೈರಸ್ ಪತ್ತೆಯಾಗುತ್ತಿದ್ದಂತೆ ಅದರ ನಿಯಂತ್ರಣಕ್ಕೆ ಘೋಷಣೆಯಾದ ಲಾಕ್ಡೌನ್ ವಲಸೆ ಕಾರ್ಮಿಕರ ಪಾಲಿಗೆ ಅಕ್ಷರಶಃ ನರಕವಾಗಿದೆ.
ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಲಾಕ್ಡೌನ್ ಘೋಷಣೆಯಾದಗಿನಿಂದ ವಲಸೆ ಕಾರ್ಮಿಕರ ಪರ ನಿರಂತರ ಸಂಪರ್ಕದಲ್ಲಿದ್ದುಕೊಂಡು ಅವರ ಸುರಕ್ಷತೆ ಹಾಗೂ ವಾಪಸ್ ಊರಿಗೆ ಕರೆ ತರಲು ಸಾಕಷ್ಟು ಶ್ರಮಿಸಿದರು. ಅವರೇ ಸ್ವತಃ ಎರಡ್ಮೂರು ಘಟನೆಗಳ ಬಗ್ಗೆ ಮಾಧ್ಯಮಗಳ ಮುಂದೆ ಹಂಚಿಕೊಂಡಿರುವುದು ಲಾಕ್ಡೌನ್ ಅದೆಷ್ಟು ಭೀಕರವಾಗಿತ್ತು ಎಂಬುದು ತಿಳಿದು ಬರುತ್ತದೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಸೇರಿದಂತೆ ಇನ್ನುಳಿದ ತಾಲೂಕಿನ ಜನರು ಮಹಾರಾಷ್ಟ್ರ, ಗೋವಾ, ಕೇರಳ, ಗುಜರಾತ್ ಮೊದಲಾದ ರಾಜ್ಯಗಳಿಗೆ ದುಡಿಯಲೆಂದು ಗುಳೆ ಹೋಗಿರುತ್ತಾರೆ. ಈ ಸಲ ಡಿಸೆಂಬರ್ ಅಂತ್ಯಕ್ಕೆ ವಲಸೆ ಹೋದವರಿಗೆ ಬರಸಿಡಿಲಿನಂತೆ ಬಂದೆರಗಿದ ಕೊರೊನಾ ವೈರಸ್, ಕಾರ್ಮಿಕರ ಬದುಕಿನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿ ಅವರ ಬದುಕನ್ನು ಮೂರಾಬಟ್ಟೆ ಮಾಡಿದೆ.