ವಿಜಯಪುರ:ನಗರ ನಿತ್ಯ ಬೃಹತ್ ಆಕಾರದಲ್ಲಿ ಬೆಳೆಯುತ್ತಿದೆ. ಸದ್ಯ ನಗರದ ಜನಸಂಖ್ಯೆ 3.50 ಲಕ್ಷ ಹೊಂದಿದೆ. ಅದಕ್ಕೆ ತಕ್ಕಂತೆ ನಗರದ ಅಭಿವೃದ್ಧಿಗಾಗಿ 35 ವಾರ್ಡ್‍ಗಳು ಕಾರ್ಯನಿರ್ವಹಿಸುತ್ತಿವೆ. ಇದಕ್ಕಾಗಿ ಪ್ರತಿ ಐದು ವರ್ಷಕ್ಕೊಮ್ಮೆ ಮಹಾನಗರ ಪಾಲಿಕೆಗೆ ಚುನಾವಣೆ ಸಹ ನಡೆಯುತ್ತಿದೆ. ಆಯ್ಕೆಯಾಗುವ ಜನಪ್ರತಿನಿಧಿಗಳು ತಮ್ಮ ವಾರ್ಡ್‍ಗಳ ಅಭಿವೃದ್ಧಿಗಾಗಿ ಸರ್ಕಾರ ನೀಡುವ ಅನುದಾನದ ಬಳಕೆ ಮಾಡಿಕೊಳ್ಳುತ್ತಾರೆ. ಸದ್ಯ ಕಳೆದ ಒಂದೂವರೆ ವರ್ಷದ ಹಿಂದೆ ಮಹಾನಗರ ಪಾಲಿಕೆಯ ಸದಸ್ಯರ ಅವಧಿ ಮುಕ್ತಾಯವಾಗಿದೆ.
ವಿಜಯಪುರ ಪಾಲಿಕೆಗೆ ಇನ್ನೂ ಇಲ್ಲ ಚುನಾವಣೆ ಭಾಗ್ಯ: ನಾಗರಿಕರು ಹೈರಾಣು - Vijayapura Metropolitan city news
ಮಳೆಯಿಂದ ತತ್ತರಿಸಿರುವ ವಿಜಯಪುರ ನಗರದಲ್ಲಿ ಈಗ ಹದಗೆಟ್ಟ ರಸ್ತೆ, ತುಂಬಿ ತುಳುಕುತ್ತಿರುವ ಚರಂಡಿಗಳನ್ನು ನೋಡಿದರೆ ವಿಜಯಪುರ ಮಹಾನಗರ ಪಾಲಿಕೆ ಆಡಳಿತ ವ್ಯವಸ್ಥೆ ಇದೆಯೋ? ಇಲ್ಲವೋ? ಎನ್ನುವ ಅನುಮಾನ ಮೂಡಿದೆ. ರಾಜ್ಯ ಸರ್ಕಾರದ ಜತೆ ಗುದ್ದಾಡಿ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಬಿಡುಗಡೆ ಮಾಡಿಸಿಕೊಳ್ಳಬೇಕಾದ ಸದಸ್ಯರು, ಕಳೆದ ಒಂದೂವರೆ ವರ್ಷದಿಂದ ಮಾಜಿ ಸದಸ್ಯರಾಗಿದ್ದಾರೆ. ಹೊಸ ಜನಪ್ರತಿನಿಧಿಗಳ ಆಗಮನಕ್ಕೆ ರಾಜ್ಯ ಸರ್ಕಾರದ ವಿಳಂಬ ಧೋರಣೆ ಅಡ್ಡಿಯಾಗಿದೆ.
ಇಷ್ಟರೊಳಗಾಗಿ ಮತ್ತೊಂದು ಅವಧಿಗೆ ಚುನಾವಣೆ ನಡೆಯಬೇಕಾಗಿತ್ತು. ಆದರೆ ವಾರ್ಡ್ ಮರುವಿಂಗಡಣೆ ಸರಿಯಾಗಿ ಆಗಿಲ್ಲ ಎಂದು ಹಲವು ಸದಸ್ಯರು ನ್ಯಾಯಾಲಯದ ಮೊರೆ ಹೋಗಿರುವ ಕಾರಣ ಚುನಾವಣೆಗೆ ಪ್ರಕ್ರಿಯೆ ನಡೆಸದಂತೆ ನ್ಯಾಯಾಲಯ ನಿರ್ದೇಶನ ನೀಡಿ, ವರದಿ ಸಲ್ಲಿಸುವಂತೆ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿತ್ತು. ಅದರಂತೆ ಆಯುಕ್ತರು ಸಹ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ. ಈಗ ಸರ್ಕಾರ ಈ ವರದಿಯತ್ತ ಗಮನಹರಿಸಬೇಕಾಗಿದೆ. ಸದ್ಯ ವಿಜಯಪುರ ನಗರದ ಮೂಲಭೂತ ಸೌಲಭ್ಯ ಹದಗೆಡಲು ಇದು ಕಾರಣವಾಗಿದೆ.
ವಿಜಯಪುರ ನಗರ ವಾಸಿಗಳು ತಮ್ಮ ವಾರ್ಡ್‍ಗಳ ಸಮಸ್ಯೆ ಅಧಿಕಾರಿಗಳ ಬಳಿ ಹೇಳಿದರೆ ಅದು ಪರಿಹಾರವಾಗುತ್ತಿಲ್ಲ. ಹೀಗಾಗಿ ಹಿಂದೆ ಇದ್ದ ತಮ್ಮ ಸದಸ್ಯರನ್ನೇ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಾಜಿ ಸದಸ್ಯರು ಸಹ ಅಧಿಕಾರವಿಲ್ಲದೇ ಯಾವುದೇ ಕಾರ್ಯ ಮಾಡಲು ಆಗುತ್ತಿಲ್ಲ. ಕೇವಲ ಅಧಿಕಾರಿಗಳಿಗೆ ವಿನಂತಿ ಮಾಡಿಕೊಂಡು ಚಿಕ್ಕಪುಟ್ಟ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಶೀಘ್ರ ಮುಂದಿನ ಅವಧಿಗೆ ಚುನಾವಣೆ ನಡೆದರೆ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಸದಸ್ಯರು ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ನಗರದ ಸಮಸ್ಯೆಗಳಿಗೆ ಸ್ಪಂದಿಸಬಹುದು ಎನ್ನುತ್ತಾರೆ ಮಾಜಿ ಸದಸ್ಯರು.