ವಿಜಯಪುರ: ಕೊರೊನಾ ಸೋಂಕಿತನನ್ನು ಚಿಕಿತ್ಸೆಗಾಗಿ ದಾಖಲಿಸಿಕೊಂಡ ಖಾಸಗಿ ಆಸ್ಪತ್ರೆ ಆತನ ಕುಟುಂಬದಿಂದ ಲಕ್ಷ ಲಕ್ಷ ಹಣ ಪಡೆಯುವುದಲ್ಲದೇ, ಶವ ನೀಡುವುದಕ್ಕೂ ಹಣ ಕೇಳುತ್ತಿರುವುದನ್ನು ಖಂಡಿಸಿ ಖಾಸಗಿ ಆಸ್ಪತ್ರೆ ವಿರುದ್ಧ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ.
ಗುಮ್ಮಟನಗರಿ ವಿಜಯಪುರದ ಖಾಸಗಿ ಆಸ್ಪತ್ರೆ ಕಳೆದ 18 ದಿನಗಳ ಹಿಂದೆ ಚಿಕಿತ್ಸೆಗಾಗಿ ದಾಖಲಾದ ರೋಗಿ ರಾಜು ಭೋವಿಗೆ ವೈದ್ಯರು ಈಗಾಗಲೇ 4.80 ಲಕ್ಷ ಹಣ ಪಡೆಯುವುದಲ್ಲದೆ, ಮೃತ ದೇಹ ನೀಡಲು 2.70 ಲಕ್ಷ ಪಾವತಿಸಿ ಶವ ತೆಗೆದುಕೊಂಡು ಹೋಗುವಂತೆ ಹೇಳಿದ್ದಾರೆ ಎಂದು ಆರೋಪಿಸಿ ರೋಗಿಯ ಸಂಬಂಧಿಗಳು ಹಾಗೂ ಸ್ಥಳೀಯ ಸಂಘಟನೆಗಳು ಸಾರ್ವಜನಿಕರಿಂದ ಭಿಕ್ಷೆ ಬೇಡುವ ಮೂಲಕ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ನಿರ್ದೇಶನವನ್ನು ಗಾಳಿಗೆ ತೂರಿ ವೈದ್ಯರು ಲಕ್ಷ ಲಕ್ಷ ಬಿಲ್ ಮಾಡಿದ್ದಲ್ಲದೇ, ಮೃತ ದೇಹಕ್ಕೂ ಬಾಕಿ ಬಿಲ್ ನೀಡುವಂತೆ ಕೇಳುತ್ತಿರುವುದಕ್ಕೆ ರೋಗಿಯ ಸಂಬಂಧಿಗಳು ಆಕ್ರೋಶಗೊಂಡಿದ್ದಾರೆ. ಇನ್ನು ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ಘಟನೆ ತಿಳಿಯುತ್ತಿದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ನಿಗದಿತ ದರಕ್ಕಿಂತಲೂ ಹೆಚ್ಚಿನ ಬಿಲ್ ಮಾಡಿರುವ ಆಸ್ಪತ್ರೆ ವಿರುದ್ಧ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗುವಂತೆ ರೋಗಿಯ ಸಂಬಂಧಿಗಳು ಪಟ್ಟು ಹಿಡಿದರು. ಬಳಿಕ ಜಿಲ್ಲಾ ಆರೋಗ್ಯಾಧಿಕಾರ ಡಾ. ಮಹೇಂದ್ರ ಕಾಪಸೆ ಬಂದು ಪರಿಶೀಲನೆ ನಡೆಸಿ ಸಂಧಾನ ಮಾಡುವ ಮೂಲಕ ಶವವನ್ನು ಸಂಬಂಧಿಕರಿಗೆ ಆಸ್ಪತ್ರೆ ಹಸ್ತಾಂತರಿಸಿದೆ.