ವಿಜಯಪುರ: ಸೇತುವೆ ಮೇಲಿಂದ ಭೀಮಾ ನದಿಗೆ ಹಾರಿ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಆಲಮೇಲ ತಾಲೂಕಿನ ದೇವಣಗಾಂವ್, ಅಫಜಲಪುರ ಮಧ್ಯದ ಸೇತುವೆಯಲ್ಲಿ ನಡೆದಿದೆ.
ನದಿಗೆ ನಾಣ್ಯ ಹಾಕುವ ನೆಪದಲ್ಲಿ ಸೇತುವೆ ಮೇಲಿಂದ ಜಿಗಿದು ಯುವತಿ ಆತ್ಮಹತ್ಯೆ - ಭೀಮಾ ನದಿಗೆ ಹಾರಿ ಯುವತಿ ಆತ್ಮಹತ್ಯೆ
ನದಿಗೆ ಕಾಯಿನ್ ಹಾಕುವ ನೆಪ ಹೇಳಿ ವಾಹನದಿಂದ ಕೆಳಗಿಳಿದ ಯುವತಿ ಸೇತುವೆ ಮೇಲಿಂದ ಭೀಮಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ಐಶ್ವರ್ಯ ಶ್ರೀಪಾಲ ಕಬ್ಬಿನ (20) ಸಾವಿಗೆ ಶರಣಾದ ಯುವತಿ. ಆಲಮೇಲ ಮತ್ತು ಅಫಜಲಪುರ ತಾಲೂಕಿನ ಮಧ್ಯೆ ಭೀಮಾನದಿಗೆ ಕಟ್ಟಿದ ಸೇತುವೆ ಮೇಲಿಂದ ಯುವತಿ ಹಾರಿದ್ದಾಳೆ. ಕುಟುಂಬಸ್ಥರೊಂದಿಗೆ ಗಾಣಗಾಪುರದ ದತ್ತಾತ್ರೆಯ ದೇವಸ್ಥಾನಕ್ಕೆ ಹೊರಟಿದ್ದ ವೇಳೆ ಈ ಘಟನೆ ನಡೆದಿದೆ.
ಇಂಡಿಯಿಂದ ಗಾಣಗಾಪುರಕ್ಕೆ ಅಕ್ಕ, ಬಾವ, ತಾಯಿ ಹಾಗೂ ಇತರರ ಜೊತೆಗೆ ತೆರಳುತ್ತಿದ್ದ ವೇಳೆ ಸೇತುವೆ ಮೇಲೆ ವಾಹನವನ್ನು ನಿಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ನದಿಗೆ ಕಾಯಿನ್ ಹಾಕುವ ನೆಪ ಹೇಳಿ ವಾಹನದಿಂದ ಇಳಿದಿದ್ದ ಐಶ್ವರ್ಯ ನದಿಗೆ ಜಿಗಿದಿದ್ದಾಳೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಸ್ಥಳದಲ್ಲಿ ಯುವತಿಯ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.