ವಿಜಯಪುರ:ಎರಡು ದಿನಗಳಿಂದ ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆಯಾಗುತ್ತಿದ್ದು, ಅನ್ನದಾತ ಬಿತ್ತನೆ ಕಾರ್ಯಕ್ಕೆ ಅಣಿಯಾಗುತ್ತಿದ್ದಾನೆ. ಕಳೆದ ಬಾರಿಯಂತೆ ಜಿಲ್ಲೆಯಲ್ಲಿ ತೊಗರಿ ಬೆಳೆಗೆ ಹೆಚ್ಚಿನ ಬೇಡಿಕೆ ಇದ್ದು, ಶೇ. 70ರಷ್ಟು ರೈತರು ತೊಗರಿ ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ.
ಜಿಲ್ಲೆಯಲ್ಲಿ ಪ್ರಸ್ತಕ ವರ್ಷ 6.99 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗುವ ಸಾಧ್ಯತೆಯಿದೆ. ಇದರಲ್ಲಿ 4.69 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಯಬಹುದು ಎಂದು ಅಂದಾಜಿಸಲಾಗಿದೆ. ಕಳೆದ ಬಾರಿ ತೊಗರಿ ಬೆಳೆ ರೈತನ ಕೈ ಹಿಡಿದಿತ್ತು. ಹೀಗಾಗಿ, ರೈತರು ಈ ಬಾರಿ ಕೂಡ ತೊಗರಿ ಬೆಳೆಯಲು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಇದರ ಜೊತೆ ಮುಸುಕಿನ ಜೋಳ, ಸಜ್ಜೆ, ಶೇಂಗಾ ಉಪ ಬೆಳೆಯಾಗಿ ಬೆಳೆಯಲು ರೈತರು ಸಿದ್ಧತೆ ಮಾಡಿಕೊಂಡಿದ್ದಾರೆ.