ವಿಜಯಪುರ:ಟೊಮೆಟೊ ಬೆಲೆ ಗಗನಕ್ಕೆ ಏರಿದ ಬೆನ್ನಲ್ಲಿಯೇ, ಈಗ ತೋಟಗಾರಿಕೆ ಬೆಳೆಗಳಿಗೂ ಶುಕ್ರದಶೆ ಆರಂಭವಾಗಿದೆ. ಆರೋಗ್ಯಕ್ಕೆ ಸಂಜೀವಿನಿ ಎಂದು ಕರೆಸಿಕೊಳ್ಳುವ ದಾಳಿಂಬೆ ಬೆಲೆ ಸಹ ಏರಿಕೆ ಕಂಡಿದೆ. ಇದನ್ನು ಬೆಳೆದ ನಿವೃತ್ತ ನೌಕರನೊಬ್ಬರು ಲಕ್ಷ ಲಕ್ಷ ಹಣ ಸಂಪಾದಿಸಿದ್ದಾರೆ. ನಿಷ್ಠೆಯಿಂದ ಕೃಷಿ ಕೈಂಕರ್ಯ ಮಾಡಿದರೆ ಭೂತಾಯಿ ಎಂದೂ ಕೈ ಬಿಡುವುದಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ.
ಇವರು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ವಂದಾಲ ಗ್ರಾಮದ ಪ್ರಗತಿಪರ ರೈತ ಬಸಪ್ಪ ಸಿದ್ದಪ್ಪ ಕುಂಬಾರ. ಮೊದಲು ಪಶು ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ತಮ್ಮ ನಿವೃತ್ತಿ ಜೀವನವನ್ನ ಮನೆಯಲ್ಲಿ ಕುಳಿತು ಸಮಯ ಕಳೆಯುವ ಬದಲು ಇವರು ತಮ್ಮ 10 ಎಕರೆ ಭೂಮಿಯಲ್ಲಿ ಈರುಳ್ಳಿ, ಬ್ಯಾಡಗಿ ಮೆಣಸಿನಕಾಯಿ ಬೆಳೆದಿದ್ದಾರೆ. ಅದರಲ್ಲಿ ಮೂರು ಎಕರೆಯಲ್ಲಿ ಮಾತ್ರ 700 ಸಸಿಗಳನ್ನು ನಾಟಿ ಮಾಡಿ ಭರಪೂರ ದಾಳಿಂಬೆ ಬೆಳೆದಿದ್ದಾರೆ.
ಲಕ್ಷ ಲಕ್ಷ ಗಳಿಕೆ:ಇವರು ಬೆಳೆದ ಮೊದಲ ಫಸಲು ಮೂರು ಎಕರೆಯಲ್ಲಿ 8 ಟನ್ ಬೆಳೆದು 4 ನಾಲ್ಕು ಲಕ್ಷ ರೂಪಾಯಿ ಆದಾಯ ತಂದು ಕೊಟ್ಟಿದೆ. 2ನೇ ಫಸಲು ಕಟಾವಿನ ವೇಳೆ 15 ಟನ್ ಬೆಳೆದು, 10 ಲಕ್ಷ ರೂಪಾಯಿ ಆದಾಯ ಪಡೆದುಕೊಂಡಿದ್ದಾರೆ. ಇನ್ನು ಮೂರನೇ ಕಟಾವು ಮಾಡಿದರೆ ಅಂದಾಜು 10 ಟನ್ ಫಸಲು ಬರುವ ನಿರೀಕ್ಷೆಯನ್ನು ಅವರು ಹೊಂದಿದ್ದಾರೆ. ಈ ಮೂಲಕ ಸುಮಾರು 10 ಲಕ್ಷ ರೂಪಾಯಿ ಲಾಭದ ನಿರೀಕ್ಷೆ ಬಸಪ್ಪ ಸಿದ್ದಪ್ಪನವರದ್ದು, ಹೀಗೆ ಪ್ರತಿ ಕಟಾವಿನಲ್ಲೂ ಲಕ್ಷ ಲಕ್ಷ ಹಣ ಎಣಿಸುತ್ತಿರುವ ಇವರು, ಸಖತ್ ಸಂತಸದಲ್ಲಿದ್ದಾರೆ.