ವಿಜಯಪುರ:ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಗಳ ತಂಡ ಇಂದು ಜಿಲ್ಲೆಯ ಕೋಲ್ಹಾರ ತಾಲೂಕಿನ ಮಲಘಾಣ ಗ್ರಾಮಕ್ಕೆ ಭೇಟಿ ನೀಡಿದ್ದು, ಭೂಕಂಪನ ಮಾಪಕ ಉಪಕರಣಗಳನ್ನು ಅಳವಡಿಸುವ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ವಿಜಯಪುರಕ್ಕೆ ಭೇಟಿ ನೀಡಿದ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಗಳು ಜಿಲ್ಲೆಯ ಕೋಲ್ಹಾರ ತಾಲೂಕಿನ ಮಲಘಾಣ, ಮಸೂತಿ, ಬಬಲೇಶ್ವರ ತಾಲೂಕಿನ ಅಡವಿ ಸಂಗಾಪೂರ ಮತ್ತು ತಿಕೋಟಾ ತಾಲೂಕಿನ ಸೋಮದೇವರ ಹಟ್ಟಿ, ಮಲಕನದೇವರಹಟ್ಟಿ, ಹುಬನೂರ ಗ್ರಾಮಗಳ ವ್ಯಾಪ್ತಿಯ ಭೂಮಿಯಲ್ಲಿ ಶಬ್ಧವಾಗುತ್ತಿದೆ. ಈಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವ್ಶೆಜ್ಞಾನಿಕ ಅಧಿಕಾರಿಗಳಾದ ಜಗದೀಶ್, ಡಾ.ರಮೇಶ ದಿಕ್ಪಾಲ, ಕಿರಿಯ ವ್ಶೆಜ್ಞಾನಿಕ ಅಧಿಕಾರಿ ಕೆ.ಕೆ ಅಭಿನಯ, ಕಿರಿಯ ವ್ಶೆಜ್ಞಾನಿಕ ಅಧಿಕಾರಿಗಳನ್ನು ಒಳಗೊಂಡ ಮೂವರು ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿತು. ಗಣಿ ಮಾಲೀಕರು ಸರ್ಕಾರವು ನಿಗದಿಪಡಿಸಿದ ಪದ್ಧತಿಯಲ್ಲಿ ಬ್ಲಾಸ್ಟ್ ಮಾಡುತ್ತಿರುವ ಬಗ್ಗೆ ಅವರಿಂದ ಮತ್ತು ಈ ಗ್ರಾಮಗಳ ಗ್ರಾಮಸ್ಥರಿಂದ ಶಬ್ಧ ಮತ್ತು ಕಂಪನದ ಬಗ್ಗೆ ಹೇಳಿಕೆ ಪಡೆದರು.
ವಿಜಯಪುರಕ್ಕೆ ಭೇಟಿ ನೀಡಿದ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಗಳು ರಾಜ್ಯಾದ್ಯಂತ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರದಿಂದ ಒಟ್ಟು 14 ಶಾಶ್ವತ ಭೂಕಂಪನಾ ಮಾಪನ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಈ ಯಾವ ಭೂಕಂಪನ ಮಾಪನ ಕೇಂದ್ರಗಳಲ್ಲಿಯೂ ಸಹ ಜಿಲ್ಲೆಯ ಈ ಗ್ರಾಮಗಳಲ್ಲಿ ಉಂಟಾದ ಶಬ್ಧ ಮತ್ತು ಕಂಪನದ ಯಾವುದೇ ರೀತಿಯ ಮಾಪನ ದಾಖಲಾಗಿರುವುದಿಲ್ಲ. ಈ ರೀತಿಯ ಶಬ್ಧ ಮತ್ತು ಕಂಪನವು ಈ ಪ್ರದೇಶಗಳಲ್ಲಿ ಆದ ಅತಿ ಹೆಚ್ಚಿನ ಮಳೆಯಿಂದ ಅಂತರ್ಜಲ ಮಟ್ಟದ ಏರಿಕೆಯಿಂದ ಉಂಟಾಗಿರುವ ಪ್ರಕ್ರಿಯೆಯಾಗಿರುತ್ತದೆ. ಅಂತರ್ಜಲ ಮಟ್ಟವು ಕಡಿಮೆಯಾದ ತಕ್ಷಣ ತಾನಾಗಿಯೇ ಈ ಪ್ರಕ್ರಿಯೆಯೂ ನಿಂತು ಹೋಗುವ ಸಂಭವವಿರುತ್ತದೆ ಎಂದು ವೈಜ್ಞಾನಿಕ ತಂಡ ಅಭಿಪ್ರಾಯಪಟ್ಟಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಂಡದ ವರದಿ ಹಿನ್ನೆಲೆ ಜಿಲ್ಲೆಯ ಕೋಲ್ಹಾರ ತಾಲೂಕಿನ ಮಲಘಾಣ ಗ್ರಾಮದಲ್ಲಿ ತಾತ್ಕಾಲಿಕ ಭೂಕಂಪನ ಮಾಪನ ಕೇಂದ್ರ ಅಳವಡಿಸುವಂತೆ ಜಿಲ್ಲಾಡಳಿತದಿಂದ ಶಿಫಾರಸು ಮಾಡಲಾಗಿದೆ. ಹೀಗಾಗಿ ಜನರು ಯಾವುದೇ ರೀತಿಯ ಆತಂಕ ಪಡುವ ಅಗತ್ಯ ಇಲ್ಲ ಹಾಗೂ ನಿರ್ಭೀತಿಯಿಂದ ಇರುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.