ಕರ್ನಾಟಕ

karnataka

By

Published : Jun 30, 2020, 8:13 PM IST

ETV Bharat / state

ವಿಜಯಪುರ ಜಿಪಂ ಚುನಾವಣೆ.. ಕಾಂಗ್ರೆಸ್ ರಣತಂತ್ರದ ಎದುರು ಮತ್ತೆ ಮುದುಡಿದ ಕಮಲ!!

ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗುವ ಹೊತ್ತಿನಲ್ಲಿ ಕಾಂಗ್ರೆಸ್ ಮುಖಂಡರು ಬಿಜೆಪಿಯ ಸದಸ್ಯರನ್ನು ಸೆಳೆದಿದ್ದಾರೆ ಎಂದು ಆರೋಪಿಸಿ, ಬಿಜೆಪಿ ಕಾರ್ಯಕರ್ತರು ಜಿಪಂ ಮುಖ್ಯದ್ವಾರ ಬಳಿ ಪ್ರತಿಭಟನೆ ನಡೆಸಿದರು. ಈ ವೇಳೆ ಓರ್ವ ಪೊಲೀಸ್ ಪೇದೆ ಸೇರಿ ಹಲವರಿಗೆ ಸಣ್ಣ ಪುಟ್ಟ ಗಾಯಗಳಾದವು..

Vijayapura
ಜಿಲ್ಲಾ ಪಂಚಾಯತಿ ಚುನಾವಣೆ

ವಿಜಯಪುರ :ಜಿಲ್ಲಾ ಪಂಚಾಯತ್‌ನಲ್ಲಿ ಬಹುಮತ ಇದ್ದರೂ ಕೂಡಾ ಕಳೆದ ನಾಲ್ಕು ವರ್ಷದಿಂದ ಅಧ್ಯಕ್ಷ ಸ್ಥಾನ ಸಿಗದೇ ಬಿಜೆಪಿ ಹತಾಶೆಗೊಂಡಿತ್ತು. ಈ ಬಾರಿಯಾದ್ರೂ ಅಧ್ಯಕ್ಷ ಸ್ಥಾನ ತನ್ನದಾಗಿಸಿಕೊಳ್ಳುವ ಪ್ರಯತ್ನದಲ್ಲಿ ಮತ್ತೊಮ್ಮೆ ಎಡವಿದೆ. ಕಾಂಗ್ರೆಸ್​ನ ಮೂವರನ್ನು ಆಪರೇಷನ್ ಕಮಲದ ಮೂಲಕ ತನ್ನ ಬುಟ್ಟಿಗೆ ಹಾಕಿಕೊಂಡರೂ ಸಹ ತಮ್ಮ ಪಕ್ಷದ ನಾಲ್ವರು ಸದಸ್ಯರು ಕಾಂಗ್ರೆಸ್ ಪರ ನಿಂತಿದ್ದರಿಂದಾಗಿ ಬಿಜೆಪಿ ಗೆಲುವಿನ ದಡ ಸೇರಲು ಆಗಲಿಲ್ಲ.

ಜಿಲ್ಲಾ ಪಂಚಾಯತ್‌ ಹಾಲಿ ಅಧ್ಯಕ್ಷ ಶಿವಯೋಗಪ್ಪ ನೇದಲಗಿ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್​ನಿಂದ ಸಾರವಾಡ ಕ್ಷೇತ್ರದ ಜಿಪಂ ಸದಸ್ಯೆ ಸುಜಾತಾ ಸೋಮನಾಥ ಕಳ್ಳಿಮನಿ ಹಾಗೂ ಬಿಜೆಪಿಯಿಂದ ಇಂಡಿ ತಾಲೂಕಿನ ನಿವರಗಿ ಜಿಪಂ ಸದಸ್ಯ ಭೀಮಾಶಂಕರ್ ಮಹಾದೇವಪ್ಪ ಬಿರಾದಾರ ನಾಮಪತ್ರ ಸಲ್ಲಿಸಿದರು. ಬಹುಮತವಿದ್ದರೂ ಅಧ್ಯಕ್ಷ ಸ್ಥಾನ ವಂಚಿತವಾಗಿದ್ದ ಬಿಜೆಪಿ ಈಗ ಅಧ್ಯಕ್ಷ ಸ್ಥಾನ ಪಡೆಯಬೇಕೆಂದು ಶತಾಯಗತಾಯ ಚುನಾವಣಾ ರಣತಂತ್ರ ಹೆಣೆದಿದ್ದು ಜಿಲ್ಲೆಯಲ್ಲಿ ಕುತೂಹಲ ಮೂಡಿಸಿತ್ತು.

ಕಾಂಗ್ರೆಸ್ ರಣತಂತ್ರದ ಎದುರು ಮತ್ತೆ ಎಡವಿದ ಕಮಲ..

ಜಿಲ್ಲಾ ಪಂಚಾಯತ್ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲು ಸೆಕ್ಷನ್ 144 ಜಾರಿ ಮಾಡಲಾಗಿತ್ತು. ಈ ನಡುವೆ ಕಾಂಗ್ರೆಸ್ ನಾಯಕರು ತಮಗೆ ಭದ್ರತೆ ಒದಗಿಸುವಂತೆ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದು ಜೀವ ಭಯವಿದೆ ಎಂದಿದ್ದರು. ಇದಾದ ಬಳಿಕ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ನಡೆಯಿತು. ಈ ಬಾರಿ ಅಧ್ಯಕ್ಷ ಸ್ಥಾನ ಪಡೆಯಲು ಮೂರು ಜನ ಕಾಂಗ್ರೆಸ್ ಸದಸ್ಯರನ್ನು ಆಪರೇಷನ್ ಮೂಲಕ ಸೆಳೆದಿತ್ತು. ಈ ರಣತಂತ್ರಕ್ಕೆ ಪ್ರತಿತಂತ್ರ ಕಾಂಗ್ರೆಸ್ ರೂಪಿಸಿ ಬಿಜೆಪಿಯ ನಾಲ್ಕು ಸದಸ್ಯರನ್ನು ತನ್ನತ್ತ ಸೆಳೆಯಿತು.

ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗುವ ಹೊತ್ತಿನಲ್ಲಿ ಕಾಂಗ್ರೆಸ್ ಮುಖಂಡರು ಬಿಜೆಪಿಯ ಸದಸ್ಯರನ್ನು ಸೆಳೆದಿದ್ದಾರೆ ಎಂದು ಆರೋಪಿಸಿ, ಬಿಜೆಪಿ ಕಾರ್ಯಕರ್ತರು ಜಿಪಂ ಮುಖ್ಯದ್ವಾರ ಬಳಿ ಪ್ರತಿಭಟನೆ ನಡೆಸಿದರು. ಈ ವೇಳೆ ಓರ್ವ ಪೊಲೀಸ್ ಪೇದೆ ಸೇರಿ ಹಲವರಿಗೆ ಸಣ್ಣ ಪುಟ್ಟ ಗಾಯಗಳಾದವು. ಪೊಲೀಸರು ಕಾಂಗ್ರೆಸ್ ಪರ ಕೆಲಸ ಮಾಡುತ್ತಿದ್ದು, ನಮ್ಮ ಬಿಜೆಪಿಯ ನಾಲ್ಕು ಸದಸ್ಯರನ್ನು ಕಿಡ್ನ್ಯಾಪ್‌ ಮಾಡಿದ್ದಾರೆ ಎಂದು ಆರೋಪಿಸಿದರು.

ಬೆಳಗಾವಿ ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲನ್ ಬಿಸ್ವಾಸ್ ನೇತೃತ್ವದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಮಡಿಲಿಗೆ ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಗಾದಿ ಒಲಿಯಿತು‌. ನೂತನ ಜಿಪಂ ಅಧ್ಯಕ್ಷರಾಗಿ ಕೈಪಕ್ಷದ ಸುಜಾತಾ ಕಳ್ಳಿಮನಿ ಆಯ್ಕೆಯಾದರು. ಪ್ರತಿಸ್ಪರ್ಧಿ ಬಿಜೆಪಿಯ ಭೀಮಾಶಂಕರ್ ಬಿರಾದಾರ ವಿರುದ್ಧ ಗೆಲುವು ಸಾಧಿಸಿದರು. ಕಾಂಗ್ರೆಸ್ ಅಭ್ಯರ್ಥಿ ಸುಜಾತಾ ಪರ 22 ಮತಗಳು‌ ಚಲಾವಣೆಯಾದವು. ಬಿಜೆಪಿಯ ಭೀಮಾಶಂಕರ ಬಿರಾದಾರ ಪರ 20 ಮತ ಚಲಾವಣೆಯಾದವು.

20 ಸದಸ್ಯ ಬಲವಿದ್ದರೂ ಅಧ್ಯಕ್ಷ ಗಾದಿ ಹಿಡಿಯಲು ಬಿಜೆಪಿ ಮತ್ತೊಮ್ಮೆ ವಿಫಲವಾಗಿದೆ. ಜಿಲ್ಲಾ ಬಿಜೆಪಿ ಭಿನ್ನಮತ ಮತ್ತೊಮ್ಮೆ ಸ್ಫೋಟವಾಯಿತು. ಇತ್ತ ಪ್ರತಿತಂತ್ರ ಹೆಣೆದ ಕೈ ಪಾಳಯದಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು. ಮಾಜಿ ಸಚಿವ ಎಂ ಬಿ ಪಾಟೀಲ, ಎಂಎಲ್​ಸಿ ಸುನೀಲ್‌ಗೌಡ ಪಾಟೀಲ್ ಖುದ್ದು ಹಾಜರಿದ್ದು, ಗೆಲುವಿನ ತಂತ್ರ ಹೆಣೆದು ಪಕ್ಷದ ಅಭ್ಯರ್ಥಿ ಗೆಲುವಿಗೆ ಕಾರಣರಾದರು.

ABOUT THE AUTHOR

...view details