ವಿಜಯಪುರ :ಉಕ್ರೇನ್ ದೇಶದಲ್ಲಿ ಉಂಟಾಗಿರುವ ಯುದ್ಧ ಹಾಗೂ ತುರ್ತು ಪರಿಸ್ಥಿತಿಯಿಂದ ಅಲ್ಲಿರುವ ಭಾರತೀಯ ವಿದ್ಯಾರ್ಥಿಗಳು, ನಾಗರಿಕರು ಆತಂಕದಲ್ಲಿದ್ದಾರೆ. ಕರ್ನಾಟಕದ ಹಲವು ವಿದ್ಯಾರ್ಥಿಗಳು ಅಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ವಿಜಯಪುರ ಮೂಲದ ಮೆಡಿಕಲ್ ವಿದ್ಯಾರ್ಥಿನಿಯೂ ಉಕ್ರೇನ್ನಲ್ಲಿ ಸಿಲುಕಿದ್ದಾರೆ.
ಉಕ್ರೇನ್ನಲ್ಲಿ ಸಿಲುಕಿರುವ ಮಗಳ ಕುರಿತು ಪೋಷಕರ ಮಾಹಿತಿ ಜಿಲ್ಲೆಯ ತಾಳಿಕೋಟೆ ತಾಲೂಕಿನ ತಮದಡ್ಡಿ ನಿವಾಸಿಯಾಗಿರುವ ಮಲ್ಲನಗೌಡ ಕವಡಿಮಟ್ಟಿ ಹಾಗೂ ಕಮಲಾಕ್ಷಿ ದಂಪತಿಯ ಪುತ್ರಿ ಸುಚಿತ್ರಾ ಸದ್ಯ ಉಕ್ರೇನ್ನಲ್ಲಿ ಎಂಬಿಬಿಎಸ್ ಎರಡನೇ ವರ್ಷದಲ್ಲಿ ಓದುತ್ತಿದ್ದಾರೆ. ಇಲ್ಲಿ ನನಗೆ ಯಾವುದೇ ತೊಂದರೆ ಇಲ್ಲ ಎಂದು ಅವರ ಪೋಷಕರಿಗೆ ಸುಚಿತ್ರಾ ವಿಡಿಯೋ ಕಾಲ್ ಮಾಡಿ ಧೈರ್ಯ ತುಂಬಿದ್ದಾರೆ.
ಮುಂದಿನ ತಿಂಗಳು ಮಾರ್ಚ್ 3 ರಂದು ಭಾರತಕ್ಕೆ ವಾಪಸ್ ಆಗಲು ಸುಚಿತ್ರಾ ವಿಮಾನ ಟಿಕೇಟ್ ಬುಕ್ ಮಾಡಿದ್ದರು. ಆದ್ರೆ ಯುದ್ಧ ಆರಂಭಗೊಂಡ ಮೇಲೆ ವಿಮಾನ ಸೇವೆ ಸ್ಥಗಿತಗೊಂಡಿದೆ. ಹೀಗಾಗಿ ಸುಚಿತ್ರಾಗೆ ಭಾರತಕ್ಕೆ ಮರಳಲು ತೊಂದರೆಯಾಗಿದೆ. ಇದರಿಂದಾಗಿ ಪೋಷಕರು ಆತಂಕಕ್ಕೆ ಒಳಗಾಗಿದ್ದು, ಹೇಗಾದರೂ ಮಾಡಿ ಮಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆ ತರಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಉಕ್ರೇನ್ ಏರ್ಪೋರ್ಟ್ನಲ್ಲಿ ಸಿಲುಕಿರುವ ರಾಜ್ಯದ 10 ವಿದ್ಯಾರ್ಥಿಗಳ ರಕ್ಷಣೆಗೆ ಕ್ರಮ: ಸಿಎಂ ಬೊಮ್ಮಾಯಿ
ವಿಡಿಯೋ ಕಾಲ್ ಮೂಲಕ ಮಾತುಕತೆ: ಪೋಷಕರು ಉಕ್ರೇನ್ನಲ್ಲಿರುವ ತಮ್ಮ ಮಗಳಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ. ಸದ್ಯ ಯಾವುದೇ ಆತಂಕವಿಲ್ಲ, ಭಾರತೀಯ ವಿದ್ಯಾರ್ಥಿಗಳು ಒಂದೇ ಕಡೆ ಇರಬೇಕು ಎಂದು ಅಲ್ಲಿನ ಕಾಲೇಜು ಆಡಳಿತ ಮಂಡಳಿ ಸೂಚಿಸಿದೆ ಎಂದು ಪೋಷಕರಿಗೆ ಸುಚಿತ್ರಾ ಹೇಳಿದ್ದಾರೆ.