ವಿಜಯಪುರ: ಜಿಲ್ಲಾಸ್ಪತ್ರೆಯಲ್ಲಿ ಸಿಜೇರಿಯನ್ ಮಾಡಿಸಿಕೊಂಡ ಬಾಣಂತಿಯರ ಹೊಲಿಗೆ ಬಿಚ್ಚಿರುವ ಪ್ರಕರಣ ಸಂಬಂಧ ಜಿಲ್ಲಾಡಳಿತ ಸಮಗ್ರ ತನಿಖೆಗೆ ಆದೇಶಿಸಿತ್ತು. ಉಪ ವಿಭಾಗಾಧಿಕಾರಿ ನೇತೃತ್ವದ ತನಿಖಾ ತಂಡ ಜಿಲ್ಲಾಧಿಕಾರಿಗಳಿಗೆ ತನ್ನ ವರದಿ ಸಲ್ಲಿಸಿದೆ. ಈ ತನಿಖಾ ವರದಿಯಲ್ಲಿ ಹಲವಾರು ಪ್ರಮುಖ ಅಂಶಗಳನ್ನು ಪರಿಗಣಿಸಿರುವ ತನಿಖಾ ತಂಡ, ಈ ಆಸ್ಪತ್ರೆಯ ಸಾಮರ್ಥ್ಯಕ್ಕಿಂತ ಹೆಚ್ಚಿನ ಒತ್ತಡ ಬಿದ್ದಿದ್ದರಿಂದ, ಅತಿ ಹೆಚ್ಚು ರೋಗಿಗಳು ಸಿಜಿರಿಯನ್ಗೆ ಒಳಗಾಗಿದ್ದರಿಂದ ಇಂಥ ಘಟನೆ ನಡೆದಿದೆ ಪ್ರಮುಖವಾಗಿ ತಿಳಿಸಿದೆ. ಜೊತೆಗೆ ಒಂದೇ ಆಪರೇಷನ್ ಥಿಯೇಟರ್ ಇರುವುದು, ಕೆಲ ತಜ್ಞ ವೈದ್ಯರ ಕೊರತೆ ಇರುವುದು ಈ ಘಟನೆಗೆ ಕಾರಣ ಎಂದು ವರದಿಯಲ್ಲಿ ಹೇಳಿದೆ.
ಈಗಿರುವ ಒಂದೇ ಆಪರೇಷನ್ ಕೊಠಡಿಯನ್ನು ಶುಚಿಯಾಗಿ ಇಟ್ಟುಕೊಳ್ಳದಿರುವುದು ಒಂದು ಕಾರಣ ಎಂದು ವರದಿಯಲ್ಲಿ ತಿಳಿಸಿದೆ. ಜೊತೆಗೆ ಇನ್ನೂ ಹೆಚ್ಚಿನ ತಜ್ಞ ವೈದ್ಯರ ನೇಮಕಾತಿ, ಇನ್ನೊಂದು ಆಪರೇಷನ್ ಕೊಠಡಿ, ಅಗತ್ಯ ನರ್ಸ್ಗಳು, ಮೂಲ ಸೌಕರ್ಯಗಳನ್ನು ಒದಗಿಸುವಂತೆಯೂ ವರದಿಯಲ್ಲಿ ಸಲಹೆ ನೀಡಿದೆ.
ವರದಿ ಸಲ್ಲಿಕೆ ಯಾಗುತ್ತಲೇ ಉಪ ಲೋಕಾಯುಕ್ತ ಬಿ.ಎಸ್. ಪಾಟೀಲ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ, ಎಸ್.ಪಿ. ಸೇರಿದಂತೆ ಹಲವು ಅಧಿಕಾರಿಗಳು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಓಪಿಡಿ, ಲ್ಯಾಬ್, ಬಾಣಂತಿಯರ ವಾರ್ಡ್ಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಯಿತು.