ವಿಜಯಪುರ:ಮಹಾರಾಷ್ಟ್ರ ರಾಜ್ಯದಿಂದ ಜಿಲ್ಲೆಗೆ ಪ್ರವೇಶ ಮಾಡುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇಡಲಾಗಿದ್ದು, ಆ ರಾಜ್ಯದ ಅಧಿಕೃತ ಪಾಸ್ ಇಲ್ಲದೆ ಜಿಲ್ಲೆಗೆ ಪ್ರವೇಶ ನೀಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸ್ಪಷ್ಟಪಡಿಸಿದ್ದಾರೆ.
ಉಮದಿ, ಶಿರಾಡೋಣ ಹಾಗೂ ಧೂಳಖೇಡ ಚೆಕ್ ಪೋಸ್ಟ್ಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಪಂ ಸಿಇಒ, ಅನಧಿಕೃತವಾಗಿ ಚೆಕ್ ಪೋಸ್ಟ್ಗಳಿಗೆ ಹೊರ ರಾಜ್ಯದ ಪ್ರಯಾಣಿಕರು ಜಿಲ್ಲೆಗೆ ಪ್ರವೇಶ ಮಾಡದಂತೆ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಿದರು.
ಜಿಲ್ಲೆಗೆ ಯಾರಾದರೂ ಮಹಾರಾಷ್ಟ್ರ ರಾಜ್ಯದಿಂದ ಪ್ರವೇಶ ಪಡೆಯುವ ಬಗ್ಗೆ ಗಮನಕ್ಕೆ ಬಂದಲ್ಲಿ ಆಯಾ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡುವಂತೆಯೂ ಕೂಡ ಅವರು ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮನವಿ ಮಾಡಿದರು.
ಈಗಾಗಲೇ ಕೋವಿಡ್-19 ಅಪಾಯದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇಡಲಾಗಿದ್ದು, ಅಧಿಕೃತ ಪಾಸ್ ಇಲ್ಲದೆ ಪ್ರವೇಶ ಪಡೆಯುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಅದರಂತೆ ಸ್ಥಳೀಯರು ಕೂಡ ತೀವ್ರ ನಿಗಾ ಇಟ್ಟು ಮಾಹಿತಿ ಒದಗಿಸಿ ಆಯಾ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆಗೆ ಸಹಕರಿಸುವಂತೆ ತಿಳಿಸಿದರು.