ವಿಜಯಪುರ: ಪಾಲಿಕೆ ಚುನಾವಣೆ ಮುಗಿದು ಮೂರು ತಿಂಗಳಾದರೂ ಸದಸ್ಯರಿಗಿಲ್ಲ ಅಧಿಕಾರ ಭಾಗ್ಯ..! ವಿಜಯಪುರ: 2019ರಲ್ಲಿ ನಡೆಯಬೇಕಿದ್ದ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ, ಕಳೆದ 2022ರ ಅಕ್ಟೋಬರ್ನಲ್ಲಿ ಪಾಲಿಕೆ ಚುನಾವಣೆ ನಡೆರಸಲಾಗಿತ್ತು, ಚುನಾವಣೆಯಾಗಿ ಮೂರು ತಿಂಗಳಾದರೂ ಇನ್ನು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆ ನಡೆದಿಲ್ಲ.
ವಿಜಯಪುರ ಮಹಾನಗರ ಪಾಲಿಕೆ ಸಮಸ್ಯೆಗಳ ಗೂಡಾಗಿದೆ. 2019ರಲ್ಲೇ ನಡೆಯ ಬೇಕಿದ್ದ ಪಾಲಿಕೆ ಚುನಾವಣೆ. ಹಲವು ಕಾರಣಗಳಿಂದ ಚುನಾವಣೆ ವಿಚಾರ ನ್ಯಾಯಾಲಯದ ಮೆಟ್ಟಿಲೇರಿ ಕೊನೆಗೆ 2019ರ ಅಕ್ಟೋಬರ್ 28ರಂದು ಚುನಾವಣೆ ನಡೆದಿತ್ತು. 35 ಸದಸ್ಯ ಬಲ ಇರುವ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 17, ಕಾಂಗ್ರೆಸ್ 10, ಪಕ್ಷೇತರರು 5, ಎಐಎಂಐಎಂ 2 ಹಾಗೂ ಜೆಡಿಎಸ್ 1 ಸ್ಥಾನ ಪಡೆದುಕೊಂಡಿದ್ದವು.
ಅಧಿಕಾರದ ಹೊಸ್ತಿಲಲ್ಲಿ ಬಂದು ನಿಂತಿದ್ದ ಬಿಜೆಪಿಗೆ ಒಬ್ಬ ಪಕ್ಷೇತರ ಸದಸ್ಯನ ಬೆಂಬಲ ಸಿಕ್ಕಿದ್ದರಿಂದ ಬಿಜೆಪಿ ಪಕ್ಷವು ಅಧಿಕಾರ ಪಡೆಯಿತು. ಜೊತೆಗೆ ನಗರ ಶಾಸಕ ಯತ್ನಾಳ ಹಾಗೂ ಸಂಸದ ರಮೇಶ ಜಿಗಜಿಣಗಿ ಮತಗಳೂ ಸಹ ಬಿಜೆಪಿ ಪಾಲಿಗೆ ಇರುವ ಕಾರಣ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಸ್ಥಾನ ನಮ್ಮದೇ ಎಂದುಕೊಂಡಿತ್ತು. ಆದರೆ. ಸರ್ಕಾರ ವಿಜಯಪುರ ಮಹಾನಗರ ಪಾಲಿಕೆಗೆ ಮೇಯರ್ ಸ್ಥಾನಕ್ಕೆ ಸಾಮಾನ್ಯ ಹಾಗೂ ಉಪ ಮೇಯರ್ ಸ್ಥಾನಕ್ಕೆ ಎಸ್ಟಿ ಪುರುಷ ಎಂದು ಮೀಸಲಾತಿ ಪ್ರಕಟಿಸಿದೆ.
ಇಷ್ಟಾದರೂ ಇದುವರೆಗೂ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯನ್ನು ಪ್ರಾದೇಶಿಕ ಆಯುಕ್ತರು ನಡೆಸಿಲ್ಲ. ಇತ್ತ ನೂತನ ಸದಸ್ಯರ ಆಧಿಕಾರ ಸ್ವೀಕಾರವೂ ನಡೆದಿಲ್ಲಾ. ಮೂರೂವರೆ ವರ್ಷಗಳ ನಂತರ ಚುನಾವಣೆ ನಡೆದು ಫಲಿತಾಂಶ ಪ್ರಕಟವಾಗಿ ಇನ್ನೂ ಮೇಯರ್ ಉಪ ಮೇಯರ್ ಚುನಾವಣೆಯನ್ನು ನಡೆಯದೇ ಇರುವುದು ಯಾಕೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.
ಹಲವಾರು ಸಮಸ್ಯೆಗಳಿಗೆ ಕಾರಣ: ಈ ಬಗ್ಗೆ ಮಾತನಾಡಿದ ನೂತನವಾಗಿ ಆಯ್ಕೆಯಾದ ಪಾಲಿಕೆ ಸದಸ್ಯ ಅಪ್ಪು ಪೂಜಾರಿ ಮಾತನಾಡಿ, ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ನಡೆಸದೇ ಇರುವುದು ಹಲವಾರು ಸಮಸ್ಯೆಗಳಿಗೆ ಕಾರಣವಾಗಿದೆ. ಕೆಲಸ ಮಾಡಲು ಆಧಿಕಾರಗಳು ಇಲ್ಲದಂತಾಗಿದ್ದು. ಸ್ಥಳಿಯ ಜನರು ಸಮಸ್ಯೆಗಳನ್ನು ಹೊತ್ತು ಸದಸ್ಯರ ಬಳಿ ಬಂದರೆ ಸಮಸ್ಯೆಗಳನ್ನು ಪರಿಹರಿಸಲು ಶಕ್ತಿ ಇಲ್ಲಂದಂತಾಗಿದೆ ಎಂದು ಅಸಮಾಧಾನವನ್ನು ಹೊರ ಹಾಕಿದರು.
ಆಡಳಿತ ಪಕ್ಷವಾದ ಬಿಜೆಪಿಗೆ ಅಧಿಕಾರ ಹಿಡಿಯಲು ಯಾವುದೇ ಸಮಸ್ಯೆಯಿಲ್ಲ. ಓರ್ವ ಪಕ್ಷೇತರ ಸದಸ್ಯರು ಅದಾಗಲೇ ಬಿಜೆಪಿಗೆ ಬೆಂಬಲ ನೀಡಿದ್ದಾರೆ. 35 ಸದಸ್ಯ ಬಲದಲ್ಲಿ ಈಗಾಗಲೇ 18 ಸ್ಥಾನ ಬಿಜೆಪಿ ಹೊಂದಿದೆ, ಇದಲ್ಲದೇ ಶಾಸಕ ಯತ್ನಾಳ ಹಾಗೂ ಸಂಸದ ರಮೇಶ ಜಿಗಜಿಣಗಿ ಸಹ ಮತದಾನ ಮಾಡುವ ಹಕ್ಕು ಹೊಂದಿದ್ದು ಬಿಜೆಪಿ ಪಕ್ಷವು ಆಧಿಕಾರ ಹಿಡಿಯೋಕೆ ಸಾಧ್ಯವಿದೆ.
ಆದರೆ, ಇಷ್ಟರ ಹೊರತಾಗಿಯೂ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ನಡೆಸದೇ ನಾವೆಲ್ಲಾ ಅಧಿಕಾರ ವಂಚಿತರಾಗಿದ್ದೇವೆ. ಸರ್ಕಾರ ಪ್ರಾದೇಶಿಕ ಆಯುಕ್ತರು ತ್ವರಿತವಾಗಿ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ನಡೆಸಬೇಕೆಂದು ನೂತನ ಸದಸ್ಯರು ಒತ್ತಾಯ ಮಾಡಿದ್ದಾರೆ.
ಪಾಲಿಕೆಗೆ ಚುನಾವಣೆ ನಡೆಸಿದ್ದಷ್ಟೇ ಸಾಧನೆ ಎಂಬಂತಾಗಿದೆ. ಆದರೆ, ಆಯ್ಕೆಯಾದ ಸದಸ್ಯರಿಗೆ ಅಧಿಕಾರ ಇಲ್ಲವಾಗಿದೆ. ಮೇಯರ್ ಉಪ ಮೇಯರ್ ಚುನಾವಣೆಯೂ ನಡೆದಿಲ್ಲ. ನಡೆಯೋ ಯಾವ ಸೂಚನೆಯೂ ಕಾಣುತ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆ ಇತ್ತ ಗಮನ ಹರಿಸಿ ಶೀಘ್ರವೇ ವಿಜಯಪುರ ಮಹಾನಗರ ಪಾಲಿಕೆಯ ಮೇಯರ್ ಉಪ ಮೇಯರ್ ಚುನಾವಣೆ ನಡೆಸಿ ನೂತನ ಸದಸ್ಯರಿಗೆ ಆಧಿಕಾರ ಸಿಗುವಂತೆ ಮಾಡಬೇಕಿದೆ ಎಂದು ಸಾಮಾಜಿಕ ಕಾರ್ಯಕರ್ತ ಇರ್ಪಾನ್ ಶೇಖ್ ಹೇಳಿದರು.
ಇದನ್ನೂ ಓದಿ:ವಿಜಯಪುರ: ಕಡಿಮೆ ಅಂಕ ಬಂದಿದ್ದಕ್ಕೆ ಮನನೊಂದು ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ